ಬೆಂಗಳೂರು: ಬಾಡಿಗೆಗೆ ಮನೆ ಕೊಡುವಾಗ ಸೇಫ್ಟಿ ಡೆಪಾಸಿಟ್ (Home rental advance) ಆಗಿ 10 ತಿಂಗಳ ಬಾಡಿಗೆ ಮೊತ್ತವನ್ನು ಮುಂಗಡವಾಗಿ ಪಡೆಯುವಂತಿಲ್ಲ ಎಂದು ಹೊಸ ಗೃಹ ಬಾಡಿಗೆ ನಿಯಮಗಳನ್ನು ಜಾರಿ ಮಾಡಲಾಗಿದೆ.
ಹೊಸ ಗೃಹ ಬಾಡಿಗೆ ನಿಯಮಗಳ ಪ್ರಕಾರ ಮನೆ ಮಾಲೀಕರು ಮುಂಗಡವಾಗಿ 10 ತಿಂಗಳು ಬಾಡಿಗೆ ಹಣವನ್ನು ಠೇವಣಿಯಾಗಿ ಪಡೆಯಬಾರದು. ಒಂದು ವೇಳೆ ಮುಂಗಡವಾಗಿ ಎರಡು ತಿಂಗಳು ಬಾಡಿಗೆ ಹಣವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ಸೂಚಿಸಿದೆ.
ಬೆಂಗಳೂರಿನಲ್ಲಿ 10 ತಿಂಗಳು ಮುಂಗಡವಾಗಿ ಬಾಡಿಗೆ ಹಣವನ್ನು ಠೇವಣಿಯಾಗಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಮಾಲೀಕರ ಇಚ್ಛೆಗೆ ತಕ್ಕಂತೆ ದಿಢೀರನೇ ಬಾಡಿಗೆ ಹೆಚ್ಚಿಸುವುದು ಇತ್ಯಾದಿ ಆಗುತ್ತಲೇ ಇರುತ್ತದೆ. ಅಡ್ವಾನ್ಸ್ ಅತಿಯಾಯಿತು, ಮಾಲೀಕರ ಕಿರಿಕಿರಿ ಹೆಚ್ಚಾಯಿತು ಎಂಬ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಗೃಹ ಬಾಡಿಗೆ ನಿಯಮಗಳನ್ನು ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.
ಸೆಕ್ಯೂರಿಟಿ ಡೆಪಾಸಿಟ್ಗಳು ಎರಡು ತಿಂಗಳ ಬಾಡಿಗೆಗೆ ಸೀಮಿತ
ಬಾಡಿಗೆಗೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ಆಗಿ ಪಡೆಯುವಂತಿಲ್ಲ. ಎರಡು ತಿಂಗಳ ಬಾಡಿಗೆಯ ಹಣವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ಹೊಸ ನಿಯಮಗಳು ಹೇಳುತ್ತವೆ.
ಬಾಡಿಗೆ ಕರಾರುಗಳ ನೊಂದಣಿ
ಬಾಡಿಗೆಗೆ ಮನೆ ಕೊಟ್ಟಾಗ ಕರಾರು ಮಾಡಿಕೊಳ್ಳಬೇಕು. ಈ ರೆಂಟಲ್ ಅಗ್ರೀಮೆಂಟ್ ಅನ್ನು ಅಧಿಕೃತವಾಗಿ ನೊಂದಾಯಿಸಬೇಕು. ನೊಂದಣಿ ಕಚೇರಿಯಲ್ಲಿ ಬೇಕಾದರೆ ಮಾಡಬಹದು, ಆನ್ಲೈನ್ನಲ್ಲೇ ಮಾಡಬಹುದು. ಅಗ್ರೀಮೆಂಟ್ ಅನ್ನು ರಿಜಿಸ್ಟರ್ ಮಾಡದಿದ್ದರೆ 5,000 ರೂ ದಂಡ ತೆರಬೇಕಾಗುತ್ತದೆ.
ರೆಂಟಲ್ ಅಗ್ರೀಮೆಂಟ್ನಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ಸರ್ಕಾರವೇ ತಿಳಿಸಿದೆ. ಒಂದು ಸ್ಟ್ಯಾಂಡರ್ಡ್ ಟೆಂಪ್ಲೇಟ್ ಕೊಟ್ಟಿದೆ. ಅದರ ಪ್ರಕಾರ ಅಗ್ರೀಮೆಂಟ್ ಇರಬೇಕು. ಹೊಸದನ್ನು ಸೇರಿಸುವುದಾಗಲೀ, ಅಲ್ಲಿರುವುದನ್ನು ತೆಗೆಯುವುದಾಗಲೀ ಆಗಬಾರದು.
ಬಾಡಿಗೆ ಹೆಚ್ಚಳಕ್ಕೆ 3 ತಿಂಗಳ ಮುಂಚಿತ ನೋಟೀಸ್
ಮಾಲೀಕರು ಬಾಡಿಗೆಯ ಹಣವನ್ನು ದಿಢೀರನೇ ಹೆಚ್ಚಿಸುವಂತಿಲ್ಲ. ಮುಂದಿನ ತಿಂಗಳಿಂದಲೇ ಹೆಚ್ಚು ಬಾಡಿಗೆ ಕೊಡಿ ಎಂದು ಡಿಮ್ಯಾಂಡ್ ಮಾಡುವಂತಿಲ್ಲ. ಬಾಡಿಗೆ ಹೆಚ್ಚಿಸುವುದಿದ್ದರೆ 3 ತಿಂಗಳು ಮುಂಚಿತವಾಗಿ ತಿಳಿಸಬೇಕು ಎಂದು ಹೊಸ ರೆಂಟ್ ರೂಲ್ಸ್ ಹೇಳುತ್ತವೆ. ಒಂದು ವರ್ಷದಲ್ಲಿ ಒಮ್ಮೆ ಮಾತ್ರವೇ ಬಾಡಿಗೆ ಹೆಚ್ಚಿಸಲು ಅವಕಾಶ ಇರುತ್ತದೆ.
ಆನ್ಲೈನ್ನಲ್ಲಿ ಬಾಡಿಗೆ ಪಾವತಿ
ಮನೆ ಬಾಡಿಗೆ ತಿಂಗಳಿಗೆ 5,000 ರೂಗಿಂತ ಹೆಚ್ಚಿದ್ದರೆ ಅದನ್ನು ಕ್ಯಾಷ್ ಬದಲು ಯುಪಿಐ ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಪಾವತಿಸಬೇಕು. ತಿಂಗಳಿಗೆ ಮನೆ ಬಾಡಿಗೆ 50,000 ರೂಗಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತ ಆಗುತ್ತದೆ.
ಬಾಡಿಗೆ ವ್ಯಾಜ್ಯಕ್ಕೆ ಈಗ ಬೇಗ ಪರಿಹಾರ
ಮನೆ ಬಾಡಿಗೆ ಸಂಬಂಧಿಸಿದ ವ್ಯಾಜ್ಯವನ್ನು ಶೀಘ್ರ ಇತ್ಯರ್ಥಪಡಿಸಲು ಸರ್ಕಾರ ವಿಶೇಷ ರೆಂಟ್ ಕೋರ್ಟ್ಗಳು ಹಾಗೂ ಟ್ರಿಬ್ಯುನಲ್ಗಳನ್ನು ನಿಯೋಜಿಸಿದೆ. ಇಲ್ಲಿ ಬಾಡಿಗೆ ವ್ಯಾಜ್ಯ ಪ್ರಕರಣವನ್ನು 60 ದಿನದೊಳಗೆ ಇತ್ಯರ್ಥಪಡಿಸಲಾಗುತ್ತದೆ.


