ಮೈಸೂರು: ಎಸ್ಐಟಿ ತನಿಖೆಯಿಂದ ಧರ್ಮಸ್ಥಳ ಪ್ರಕರಣದ ಸತ್ಯ ಹೊರಬರುತ್ತದೆ, ಇದರಲ್ಲಿ ರಾಜಕೀಯ ಬೇಡ. ಪ್ರಕರಣದಲ್ಲಿ ಎನ್ಐಎ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಆಯೋಜಿಸಿದ್ದ ಪರಮೋತ್ಸವ ಕಾರ್ಯಕ್ರಮಕ್ಕೆ ಮೈಸೂರಿಗೆ ಸೋಮವಾರ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆ ಅವರು ಮಾತನಾಡಿದರು.
ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ಈಗಾಗಲೇ ಉತ್ತರ ನೀಡಿದ್ದೇನೆ. ಸತ್ಯ ಹೊರಬರಬೇಕು ಎಂದು ಎಸ್ಐಟಿ ರಚನೆ ಮಾಡಿದ್ದೇವೆ. ಈ ನಡುವೆ ಅನೇಕರು ಅನೇಕ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಹೇಳಿಕೆಗಳಿಂದ ಸತ್ಯ ಹೊರಬರುವುದಿಲ್ಲ, ಹೇಳಿಕೆ ನಿಲ್ಲಿಸಿ ತನಿಖೆ ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಆವಾಗ ಸತ್ಯ ಹೊರಬರುತ್ತದೆ. ಇದರಲ್ಲಿ ರಾಜಕೀಯ ಮಾಡಬಾರದು. ಈ ಪ್ರಕರಣದಿಂದ ಸತ್ಯ ಹೊರಬರಬೇಕೆಂಬುದೇ ನಮ್ಮ ಉದ್ದೇಶ ಎಂದರು.
ಈಗಾಗಲೇ ಮುಸುಕುದಾರಿ ಚನ್ನಯ್ಯನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ವಿಚಾರಣೆಯಿಂದ ಸತ್ಯ ಹೊರಬರುತ್ತದೆ. ನಾವು ಎಸ್ಐಟಿಗೆ ಹೀಗೆ ತನಿಖೆ ಮಾಡಿ ಹಾಗೆ ತನಿಖೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಪ್ರಕಾರ ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ನವರು ಮಂಜುನಾಥನ ದರ್ಶನ ಪಡೆಯಲಿ: ಜೆಡಿಎಸ್ ಪಕ್ಷದಿಂದ ಧರ್ಮಸ್ಥಳ ರ‍್ಯಾಲಿ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಜೆಡಿಎಸ್ನವರು ರ‍್ಯಾಲಿ ಮಾಡಲಿ, ಆ ಮೂಲಕ ಮಂಜುನಾಥನ ದರ್ಶನ ಪಡೆಯಲಿ. ಅವರನ್ನು ನಾವು ತಡೆಯಲು ಆಗುವುದಿಲ್ಲ, ಆದರೆ ಈ ಪ್ರಕರಣದಲ್ಲಿ ರಾಜಕಾರಣ ಬೇಡ ಎಂದು ಹೇಳಿದ್ದೇವೆ. ಎಸ್ಐಟಿ ತನಿಖೆಗೆ ಕಾಲಮಿತಿ ನಿಗದಿ ಮಾಡಲು ಸಾಧ್ಯವಿಲ್ಲ, ಆದರೆ, ಆದಷ್ಟು ಬೇಗ ತನಿಖೆ ಮಾಡಿ ಅಂತ ಹೇಳಿದ್ದೇವೆ” ಎಂದರು.
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಅಪಸ್ವರ ವಿಚಾರವಾಗಿ ಮಾತನಾಡಿ, “ಈ ಹಿಂದೆ ಮೈಸೂರು ಸಂಸ್ಥಾನದಲ್ಲಿ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದರು. ಜೊತೆಗೆ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದರು. ನಾಡಿನ ತುಂಬೆಲ್ಲಾ ದಸರಾ ಆಚರಣೆ ಮಾಡುತ್ತಾರೆ. ಒಂದು ಸಮುದಾಯ ಬಿಟ್ಟು ದಸರಾ ಆಚರಣೆ ಮಾಡಲು ಸಾಧ್ಯವೇ” ಎಂದು ಪ್ರಶ್ನಿಸಿದರು.