ಟ್ರಾಫಿಕ್ ದಂಡದ ಮೊತ್ತವನ್ನು ಪಾವತಿಸುವ ಲಿಂಕ್ ಮೊಬೈಲ್‌ಗಳಿಗೆ ಬಂದರೆ ಕ್ಲಿಕ್ ಮಾಡುವ ಮೊದಲು ಎಚ್ಚರವಾಗಿರುವಂತೆ ಟ್ರಾಫಿಕ್ ಮತ್ತು ಸೈಬರ್ ಪೊಲೀಸರು ತಿಳಿಸಿದ್ದಾರೆ. ನಾನಾ ರೀತಿಗಳಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಈಗ ಟ್ರಾಫಿಕ್ ಫೈನ್ ಮೆಸೇಜ್ ಕಳಿಸುವ ಮೂಲಕವೂ ನಡೆಯುತ್ತಿದೆ.
ಸೈಬರ್ ಕಳ್ಳರು ಕೊಡಿಗೇಹಳ್ಳಿ ಟೆಕ್ಕಿಯೊಬ್ಬರಿಗೆ ಎಪಿಕೆ ಫೈಲ್ ಕಳುಹಿಸಿದ್ದರು, ಅದನ್ನು ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ 2.65 ಲಕ್ಷ ರೂ. ಎಗರಿಸಿಸಲಾಗಿದೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ಮುರಳಿ ದೂರು ನೀಡಿದ್ದಾರೆ.
ಸಂಚಾರ ಪೊಲೀಸರು 50% ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ನೀಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು ಸವಾರರ ಮೊಬೈಲ್ ನಂಬರ್‌ಗಳಿಗೆ ಲಿಂಕ್‌ಗಳು, ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಾಹನಗಳ ದಂಡವನ್ನು ಚೆಕ್ ಮಾಡಿಕೊಳ್ಳಿ. ಹಾಗೆಯೇ ಇಲ್ಲೇ ದಂಡ ಕಟ್ಟಬಹುದು ಎಂಬ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದಾರೆ.
ಆ ಮೆಸೇಜ್‌ಗಳನ್ನು ನಂಬಿದ ಹಲವರು ಅದನ್ನು ಓಪನ್ ಮಾಡಿದ ತಕ್ಷಣ ಅಕೌಂಟ್ ನಲ್ಲಿದ್ದ ಹಣ ಮಾಯವಾಗುತ್ತದೆ. ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ಹೀಗೆ ದಂಡ ಪಾವತಿಸಲು ಅವಕಾಶವಿರುತ್ತದೆ.