ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ 359 ರನ್ ಗುರಿ ಒಡ್ಡಿದೆ.
ಗುವಾಹತಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಗೆ 358 ರನ್ ಸಂಪಾದಿಸಿತು.
ಆರಂಭಿಕರಾದ ರೋಹಿತ್ ಶರ್ಮ (14) ಮತ್ತು ಯಶಸ್ವಿ ಜೈಸ್ವಾಲ್ (22) ವಿಫಲರಾದ ನಂತರ ತಂಡವನ್ನು ಮುನ್ನಡಸಿದ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.
ಅದ್ಭುತ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ಮರಳಿದ ಋತುರಾಜ್ ಗಾಯಕ್ವಾಡ್ ಮೂರನೇ ವಿಕೆಟ್ ಗೆ 192 ರನ್ ಜೊತೆಯಾಟ ನಿಭಾಯಿಸಿದರು.
ಕೊಹ್ಲಿ 93 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಶತಕ (102) ಪೂರೈಸಿದರು. ಇದು ಅವರ 53ನೇ ಏಕದಿನ ಹಾಗೂ ಒಟ್ಟಾರೆ 84ನೇ ಶತಕವಾಗಿದೆ. ಅಲ್ಲದೇ ಸತತ 2ನೇ ಶತಕವಾಗಿದೆ. ಋತುರಾಜ್ ಗಾಯಕ್ವಾಡ್ 83 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 105 ರನ್ ಗಳಿಸಿದರು. ಇದು ಅವರ ವೈಯಕ್ತಿಕ ಎರಡನೇ ಶತಕವಾಗಿದೆ.
ಇವರಿಬ್ಬರ ನಿರ್ಗಮನದ ನಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ನಾಯಕ ಕೆಎಲ್ ರಾಹುಲ್ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 66 ರನ್ ಗಳಿಸಿದರೆ, ರವೀಂದ್ರ ಜಡೇಜಾ 27 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 24 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಕಮಾರ್ಕೊ ಜಾನ್ಸೆನ್ 2 ವಿಕೆಟ್ ಪಡೆದು ಗಮನ ಸೆಳೆದರೆ, ಲುಂಗಿ ನೆಗ್ಡಿ ಮತ್ತು ನಂದ್ರೆ ಬರ್ಗರ್ ತಲಾ 1 ವಿಕೆಟ್ ಗಳಿಸಿದರು.


