Menu

ಗಣೇಶ ಹಬ್ಬ, ಈದ್-ಮಿಲಾದ್‌ಗೆ ಡಿಜೆ ನಿಷೇಧ: ಹೈಕೋರ್ಟ್‌ ಸಮ್ಮತಿ

ಗಣೇಶ ಹಬ್ಬ, ಈದ್ ಮಿಲಾದ್‌ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಡಿಜೆ ಹಾಗೂ ಸೌಂಡ್ ಸಿಸ್ಟಮ್‌ ಬಳಕೆ ನಿಷೇಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆಗೆ ಹೈಕೋರ್ಟ್‌ ಸಮ್ಮತಿಸಿದೆ.
ಈ ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ, ‘ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆ’ ಪದಾಧಿಕಾರಿ ಚಾಮರಾಜಪೇಟೆಯ ಶಂಕರ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಲೋಪಗಳಿಲ್ಲ. ವಸತಿ ಪ್ರದೇಶದಲ್ಲಿ ಹಗಲು 55 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್ ಶಬ್ದ ಮಟ್ಟ ನಿಗದಿಪಡಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಸದ್ದು ಮಾಡುವ ಡಿಜೆ ಮತ್ತು ಸೌಂಡ್ ಸಿಸ್ಟಮ್‌ನ ಬಳಕೆಯನ್ನು ಒಪ್ಪಿಕೊಳ್ಳುವುದು ನ್ಯಾಯಾಲಯಕ್ಕೆ ಕಷ್ಟ ಎಂದು ನ್ಯಾಯಪೀಠ ಹೇಳಿದೆ.

ಶಬ್ದ ಮಾಲಿನ್ಯ ನಿಯಮಗಳು–2000ಕ್ಕೆ ಅನುಗುಣವಾಗಿ ಅಧಿಕಾರಿಗಳು ಮಾರ್ಗಸೂಚಿಗಳನ್ನು ಹೊರಡಿಸಬೇಕಿತ್ತು. ಸಾರ್ವತ್ರಿಕವಾಗಿ ಸುತ್ತೋಲೆ ಹೊರಡಿಸಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಏಕೆಂದರೆ, ಸೌಂಡ್ ಸಿಸ್ಟಮ್‌ ಉಪಕರಣಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿರುವಾಗ ಅವುಗಳ ಬಳಕೆಯನ್ನು ನಿರ್ಬಂಧಿಸುವುದು ಸಮಂಜಸ ಕ್ರಮವಲ್ಲ ಎಂದು ನಿಷೇಧ ಆದೇಶವನ್ನು ಪ್ರಶ್ನಿಸಿದ್ದರು.

Related Posts

Leave a Reply

Your email address will not be published. Required fields are marked *