ದೇವನಹಳ್ಳಿ ಸಮೀಪದ ಬಚ್ಚಳ್ಳಿ ಗೇಟ್ ಫ್ಲೈಓವರ್ ಮೇಲೆ ಹಿಟ್ ಅಂಡ್ ರನ್‌ಗೆ ಫ್ಲೈಓವರ್ ಮೇಲಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ನೇತ್ರಾವತಿ (31) ಹಿಟ್ ಅಂಡ್ ರನ್‌ಗೆ ಬಲಿಯಾದ ಮಹಿಳೆ. ನೇತ್ರಾವತಿ ಹಾಗೂ ಪತಿ ಬೈಕ್‌ನಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದರು. ಒನ್ ವೇನಲ್ಲಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿದ್ದ ನೇತ್ರಾವತಿ ಫ್ಲೈಓವರ್ ಕೆಳಗೆ ಬಿದ್ದಿದ್ದಾರೆ. ಫ್ಲೈಓವರ್ ಮೇಲಿಂದ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಅಸು ನೀಗಿದ್ದಾರೆ.
ಪತಿ ಬೈಕ್‌ನ ಎಡಭಾಗಕ್ಕೆ ಬಿದ್ದು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಮಾಡಿ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಸಂಚಾರಿ ಪೊಲೀಸರು ಕಾರು ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.