ತಿರುಪತಿ ತಿರುಮಲದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿಗೆ ಕೈಗಾರಿಕೋದ್ಯಮಿ 140 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 121 ಕೆ.ಜಿ ಬಂಗಾರ ದಾನ ಮಾಡಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಕೈಗಾರಿಕೋದ್ಯಮಿ ಶ್ರೀವಾರಿ ತಮ್ಮ ಕಂಪನಿಯ ಶೇ.60ರಷ್ಟು ಷೇರುಗಳನ್ನು ಮಾರಾಟ ಮಾಡಿ 6,000ರಿಂದ 7,000 ಕೋಟಿ ರೂ. ಹಣ ಗಳಿಸಿದರು ಎಂದು ಅವರು ತಿಳಿಸಿದರು.
ತಾವೇ ಸ್ಥಾಪಿಸಿದ ಕಂಪನಿ ಷೇರುಗಳ ಮಾರಾಟದಿಂದ ಇಷ್ಟು ದೊಡ್ಡ ಹಣ ಸಂಪಾದಿಸಲು ವೆಂಕಟೇಶ್ವರನ ಕೃಪೆ ಕಾರಣ ಎಂದು ಭಾವಿಸಿದ ಶ್ರೀವಾರಿ, ದೇವರಿಗೆ 121 ಕೆ.ಜಿ ಚಿನ್ನ ದಾನ ಮಾಡಿದ್ದಾರೆ ಎಂದು ಅವರು ಹೇಳಿದರು.
ವೆಂಕಟೇಶ್ವರ ಸ್ವಾಮಿಯನ್ನು ಪ್ರತಿದಿನ ಸುಮಾರು 120 ಕೆ.ಜಿ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಈ ಸಂಪ್ರದಾಯದಿಂದ ಪ್ರೇರಿತರಾದ ಭಕ್ತರು, ತಮ್ಮ ಭಕ್ತಿಯ ಸಂಕೇತವಾಗಿ ಅಷ್ಟೇ ಪ್ರಮಾಣದ ಚಿನ್ನವನ್ನು ದಾನ ಮಾಡಲು ತೀರ್ಮಾನಿಸಿದ್ದಾರೆ. ದಾನದ ಚಿನ್ನದ ಅಂದಾಜು ಮೌಲ್ಯ 140 ಕೋಟಿ ರೂಪಾಯಿಗೂ ಹೆಚ್ಚು ಎಂದು ತಿಳಿದು ಬಂದಿದೆ.
ಕೈಗಾರಿಕೋದ್ಯಮಿಯ ಈ ಕಾರ್ಯ ಸಮಾಜಕ್ಕೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ. ದೇಣಿಗೆ ದೇಗುಲದ ಔದಾರ್ಯ ಕಾರ್ಯಗಳು ಹಾಗು ದೇವಸ್ಥಾನದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆ ಸೇರಿದಂತೆ ತಿರುಪತಿ ತಿರುಮಲ ದೇವಸ್ಥಾನಂಸ್ (ಟಿಟಿಡಿ) ನಡೆಸುವ ಇತರೆ ಸೇವಾ ಕಾರ್ಯಗಳಿಗೂ ದೇಣಿಗೆ ಬಳಕೆಯಾಗಲಿದೆ ಎಂದು ಅವರು ಹೇಳಿದರು.
ಮುಂಬೈನ ಯುನೋ ಫ್ಯಾಮಿಲಿ ಇತ್ತೀಚೆಗೆ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಅನ್ನಪ್ರಸಾದ ಟ್ರಸ್ಟ್ಗೆ 11 ಕೋಟಿ ರೂ ದಾನ ನೀಡಿತ್ತು. ಯುನೋ ಟ್ರಸ್ಟ್ನ ಪ್ರತಿನಿಧಿ ತುಷಾರ್ ಕುಮಾರ್, ಟಿಟಿಡಿ ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರನ್ನು ಭೇಟಿಯಾಗಿ ದಾನದ ಹಣವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ಹಸ್ತಾಂತರಿಸಿದ್ದರು.
ಉನೋ ಟ್ರಸ್ಟ್ ಅನ್ನಪ್ರಸಾದಮಂ ಕಾರ್ಯಕ್ರಮಕ್ಕೆ ಗಣನೀಯ ಬೆಂಬಲದ ಕೊಡುಗೆ ನೀಡುತ್ತದೆ. ತಿರುಪತಿ ತಿರುಮಲದ ದೇಗುಲದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ಉಚಿತ ಅನ್ನದಾನ ಸೇವೆ ನೀಡಲಾಗುತ್ತಿದ್ದು, ಈ ಸೇವೆಗೆ ಈ ಹಣ ಬಳಕೆಯಾಗಲಿದೆ ಎಂದು ಅವರು ಹೇಳಿದ್ದರು.