ಶಿವಮೊಗ್ಗ ಶಿಕಾರಿಪುರದ ರಸ್ತೆಯಲ್ಲಿ ಬಿದ್ದಿದ್ದ ನಾಡಬಾಂಬ್ ಮೇಲೆ ಕೆಎಸ್ಆರ್‌ಟಿಸಿ ಬಸ್ ಸಂಚರಿಸಿದ್ದು, ಹಿಂಬದಿಯ ಟೈರ್‌ಗೆ ಸಿಲುಕಿ ಸ್ಫೋಟಗೊಂಡಿದೆ. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಶಿಕಾರಿಪುರ ತಾಲೂಕಿನ ಹಿರೇಕವಲತ್ತಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಬಸ್ ಮುಡುಬಾ ಸಿದ್ಧಾಪುರದಿಂದ ಶಿಕಾರಿಪುರಕ್ಕೆ ಸಂಚರಿಸುತ್ತಿತ್ತು.
ನಾಡಬಾಂಬ್ ಸ್ಫೋಟದ ಸದ್ದು ಕೇಳಿ ಚಾಲಕ- ನಿರ್ವಾಹಕ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ನಾಡ ಬಾಂಬ್ ಸ್ಫೋಟಗೊಂಡಿರುವುದ ತಿಳಿದಿದೆ. ಹಂದಿಗಳಿಂದ ತಮ್ಮ ಬೆಳೆ ರಕ್ಷಣೆಗೆ ಸ್ಥಳೀಯ ರೈತರು ನಾಡ ಬಾಂಬ್ ಬಳಸುತ್ತಾರೆ. ನಾಡಬಾಂಬ್ ಕೊಂಡೊಯ್ಯುವ ವೇಳೆ ರಸ್ತೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಸ್ಫೋಟದ ಸದ್ದಿನಿಂದಾಗಿ ಬಸ್ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಡಿಕ್ಕಿ ಹೊಡೆದು ನಿಂತಿದೆ. ಬಸ್‌ನ ಟೈರ್ ಅಂಚಿಗೆ ನಾಡಬಾಂಬ್ ತಗುಲಿ ಸ್ಫೋಟಗೊಂಡಿದ್ದರಿಂದ ಅಪಾಯವಾಗಿಲ್ಲ. ಟೈರ್‌ಗಳ ನಡುವೆ ಅಥವಾ ಬಸ್‌ನ ಮುಖ್ಯ ಭಾಗದ ಅಡಿ ಸ್ಫೋಟಗೊಂಡಿದ್ದರೆ ಪ್ರಯಾಣಿಕರಿಗೆ ಪ್ರಾಣಾಪಾಯವಾಗುವ ಸಾಧ್ಯತೆ ಇತ್ತು.
ಬಸ್ ಚಾಲಕ ಬಸವರಾಜ್ , ‘ನಾಡಬಾಂಬ್ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸ್ಫೋಟದ ಹಿಂದಿನ ಉದ್ದೇಶ ಮತ್ತು ಬಾಂಬ್ ಇಟ್ಟವರು ಯಾರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.


