ಬೆಂಗಳೂರು: ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶ ಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಸಂಬಂಧಪಟ್ಟ ವಿಧೇಯಕಕ್ಕೆ ವಿಧಾನ ಸಭೆಯಲ್ಲಿ ಗುರುವಾರ ಅಂಗೀಕಾರ ದೊರೆಯಿತು.
ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪರವಾಗಿ ಕಾನೂನು ಮತ್ತು ಸಂಸದ್ದೀಯ ವ್ಯವಹಾರಗಳ ಸಚಿವ ಎಚ್. ಕೆ.ಪಾಟೀಲ್ ವಿಧೇಯಕವನ್ನು ವಿಧಾನಸಭೆಯಲ್ಲಿ ಪರ್ಯಾಲೋಚನೆಗೆ ಮಂಡಿಸಿ ವಿವರಣೆ ನೀಡಿದರು.
ಅಕ್ರಮ ಗಣಿಗಾರಿಕೆ ಮತ್ತು ಅದರ ಅಪರಾಧಗಳಿಂದ ಸಂಪಾದಿಸಿದ ಸ್ವತ್ತುಗಳನ್ನು ವಸೂಲಿ ಮಾಡಿಕೊಳ್ಳಲು ಈಗಿರುವ ಕಾನೂನುಗಳಲ್ಲಿ ಅವಕಾಶಗಳಿವೆ. ಆದರೆ ನಿರ್ದಿಷ್ಟ ನಿಯಮಾವಳಿಗಳಿಲ್ಲ ಎಂದರು.
2006 ರಿಂದ 2012ರವರೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವ್ಯವಹಾರ ನಡೆದಿದೆ. ಇದರ ಬಗ್ಗೆ ಲೋಕಾಯುಕ್ತ ವರದಿ ನೀಡಿದ್ದಾರೆ, ಸಚಿವ ಸಂಪುಟ ಸಭೆಯ ವರದಿ ಕೂಡ ಇದೆ ಎಂದು ಹೇಳಿದರು.
1964ರ ಕ್ರಿಮಿನಲ್ ಆರ್ಡಿಯನ್್ಸ ಪ್ರಕಾರ ಅಕ್ರಮವಾಗಿ ಗಳಿಸಿದ ಸಂಪತ್ತನ್ನು ವಶಪಡಿಸಿಕೊಳ್ಳಬಹುದು. ಕೋಟ್ಯಾಂತರ ರೂ. ಅವ್ಯವಹಾರವಾದಾಗ ನಿರ್ದಿಷ್ಟ ಸ್ವರೂಪಗಳಿಲ್ಲ. ಯಾವುದೇ ಅಕ್ರಮ ಅಥವಾ ಅಪರಾಧ ನಡೆದಾಗ ಸರ್ಕಾರದ ಸ್ವತ್ತುಗಳು ಲೂಟಿಯಾಗುತ್ತವೆ. ಅಂತಹ ಪ್ರಕರಣಗಳಲ್ಲಿ ಪೊಲೀಸರು ಅಥವಾ ಸರ್ಕಾರದ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸುತ್ತವೆ ಮತ್ತು ಆರೋಪಿಗಳನ್ನು ಬಂಧಿಸುತ್ತವೆ. ಲೂಟಿಯಾದ ಸ್ವತ್ತಿನ ಮರು ಗಳಿಕೆಯಾಗುತ್ತಿಲ್ಲ ಎಂದರು.
ಅಪರಾಧಿಗಳು ಅಕ್ರಮ ಮಾಡಿ ಸಂಪಾದಿಸಿದ ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಲೂಟಿಯಾದ ಸ್ವತ್ತಿನ ಮರುಗಳಿಕೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಯ್ದೆ ರೂಪಿಸಲಾಗಿದೆ ಎಂದು ಹೇಳಿದರು.
ಬೇಲಿಕೇರಿ ಬಂದರಿನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಅದಿರು ಜಪ್ತಿಯಾಗಿತ್ತು. ಅದನ್ನು ಲೂಟಿ ಮಾಡಲಾಯಿತು. ಯಾರು ಲೂಟಿ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು. ಕೆಲವು ಪ್ರಕರಣಗಳಲ್ಲಿ, ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬಹುದು. ಆದರೆ ಅಕ್ರಮ ಮಾರ್ಗದಲ್ಲಿ ಸಂಪಾದಿಸಿದ ಆಸ್ತಿಗಳನ್ನು ವಸೂಲಿ ಮಾಡಲು ಆಯುಕ್ತರನ್ನು ನೇಮಿಸಬೇಕಾಗುತ್ತದೆ ಎಂದು ಹೇಳಿದರು.
ಸಿ.ಸಿ. ಪಾಟೀಲ್, ಈ ಹಿಂದೆ ತಾವು ಗಣಿ ಮತ್ತು ಭೂ ವಿಜ್ಞಾನ ಸಚಿವನಾಗಿ ಕೆಲಸ ಮಾಡಿದ್ದು. ಇಳಕಲ್ ಭಾಗದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಯುತ್ತದೆ. ಗ್ರಾನೈಟ್ ತೆಗೆಯುವ ಮುನ್ನಾ ಆರಂಭದಲ್ಲಿ ಐದು ಅಡಿ ಮಣ್ಣು ತುಂಬಿದ್ದು ಅದರ ನಂತರ ಗ್ರಾನೈಟ್ ದೊರೆಯುತ್ತದೆ. ಅಧಿಕಾರಿಗಳು ಮಣ್ಣಿನ ಅಳತೆಯನ್ನು ಸೇರಿಸಿ ಗಣಿ ಉದ್ಯಮಿಗಳಿಗೆ ದುಪ್ಪಟ್ಟು ದಂಡ ವಿಧಿಸಿದರು. ಈ ರೀತಿಯ ಕ್ರಮಗಳು ಸರಿಯಲ್ಲ. ಉದ್ಯಮದಾರರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಎಸ್.ಟಿ. ಸೋಮಶೇಖರ್ ರಾಜ್ಯದಲ್ಲಿ ಗಣಿ ಸಚಿವರು ಯಾರೂ ಎಂದು ಗೊತ್ತಿಲ್ಲ. ತಮ ಕ್ಷೇತ್ರದಲ್ಲಿ ಹಲವಾರು ಗಣಿಗಾರಿಕೆಗಳಿಂದ ಲೂಟಿಯಾಗುತ್ತಿದೆ. ಸರ್ಕಾರಕ್ಕೆ ರಾಜ್ಯಸ್ವ ನಷ್ಟವಾಗುತ್ತಿದೆ. ಇದರ ಬಗ್ಗೆ ಕಳೆದ ಅಧಿವೇಶನದಲ್ಲೂ ನಾನು ಪ್ರಸ್ತಾಪ ಮಾಡಿದೆ. ತನಿಖೆ ಮಾಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಈವರೆಗೂ ಯಾವುದೂ ಈಡೇರಿಲ್ಲ. ಈ ರೀತಿಯ ಲೂಟಿಗಳನ್ನು ಮೊದಲು ನಿಲ್ಲಿಸಿ ಅದನ್ನು ಬಿಟ್ಟು ಈ ಕಾಯ್ದೆ ಕಾನೂನುಗಳು ಬೋಗಸ್ ಎಂದರು.
ಸಚಿವ ಎಚ್.ಕೆ. ಪಾಟೀಲ್ 50 ಸಾವಿರ ಟನ್ ತೂಕಕ್ಕೂ ಹೆಚ್ಚಿನ ಅದಿರು ಲೂಟಿಯಾದರೆ ಅದನ್ನು ಸಿಬಿಐ ತನಿಖೆ ನಡೆಸುತ್ತದೆ. ಅದರ ಒಳಗಿನ ಪ್ರಕರಣವಾದರೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈ ಕಾಯ್ದೆ ಅಗತ್ಯವಾಗಿದ್ದು ಅಂಗೀಕಾರ ನೀಡಬೇಕು ಎಂದು ಮನವಿ ಮಾಡಿದರು. ಧ್ವನಿ ಮತದ ಮೂಲಕ ಕಾಯ್ದೆ ಅಂಗೀಕಾರವಾಗಿದೆ ಎಂದು ಸಭಾಧ್ಯಕ್ಷರು ಘೋಷಿಸಿದರು.