ಲಿವ್-ಇನ್ ಸಂಗಾತಿಯ ಕೊಂದಾತ ಪೊಲೀಸ್ ಕಸ್ಟಡಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೌರಾಷ್ಟ್ರದಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ನರೇಂದ್ರ ಸಿಂಗ್ ಧ್ರುವೇಲ್ ಸಂಗಾತಿಯ ಕೊಂದು ಪೊಲೀಸ್ ವಶದಲ್ಲಿರುವಾಗ ಮೃತಪಟ್ಟಿದ್ದಾನೆ.
ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಜೋಡಿ ಮೂರು ತಿಂಗಳಿನಿಂದ ವಾಸವಿತ್ತು. ಇಬ್ಬರ ನಡುವೆ ಜಗಳವಾಗಿ ಗೆಳತಿ ಪುಷ್ಪಾದೇವಿ ಮರಾವಿಯನ್ನು ಕೋಲು ಮತ್ತು ಬೆಲ್ಟ್‌ನಿಂದ ಹೊಡೆದಿದ್ದರಿಂದ ಆಕೆ ಪ್ರಾಣ ಕಳೆದುಕೊಂಡಿದ್ದಳು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಧ್ರುವೇಲ್‌ನನ್ನು ಬಂಧಿಸಿದಾಗ, ತಾನು ಮಾಡಿದ ಅಪರಾಧವನ್ನು ಆತ ಒಪ್ಪಿಕೊಂಡಿದ್ದ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು.
ಮರುದಿನ ಬೆಳಗಿನ ಜಾವ ಆತನಿಗೆ ಎದೆನೋವು ತೀವ್ರಗೊಂಡು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು, ತಪಾಸಣೆ ನಂತರ ವೈದ್ಯರು ಆತ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ.
ಪತ್ನಿಯ ಕೊಂದು ಶವದ ಜತೆ ಸೆಲ್ಫಿ ವಾಟ್ಸಾಪ್ ಸ್ಟೇಟಸ್‌ಗೆ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಪತ್ನಿಯ ಕೊಂದು ಶವದ ಜತೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ ಪತಿ ಬಾಲಮುರುಗನ್ ಅವರಿಂದ ಪ್ರತ್ಯೇಕವಾಗಿ ವಾಸವಿದ್ದರು. ಪತಿ ಯಾರಿಗೂ ಗೊತ್ತಾಗದಂತೆ ಆಕೆಯಿದ್ದ ಹಾಸ್ಟೆಲ್‌ಗೆ ಬಂದಿದ್ದ.
ಆಕೆಯನ್ನು ಭೇಟಿಯಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಬಾಲಮುರುಗನ್ ಕತ್ತಿ ಹೊರತೆಗೆದು ಆಕೆಯನ್ನು ಕಡಿದು ಕೊಂದಿದ್ದಾನೆ. ಆಕೆಯ ದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಆಗಿ ಅಪ್‌ಲೋಡ್ ಮಾಡಿ, ಆಕೆ ತನಗೆ ದ್ರೋಹ ಮಾಡಿದ್ದಾಳೆಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


