ಕಳೆದೊಂದು ವಾರದಲ್ಲಿ ಬೆಂಗಳೂರಿನ ಬೇರೆ ಬೇರೆ ಕಡೆ ಬಿಎಂಟಿಸಿ ಬಸ್‌ನಡಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ ಯಲಹಂಕ ಕೋಗಿಲು ಕ್ರಾಸ್ ಬಳಿ ಬಿಎಂಟಿಸಿ ಬಸ್‌ಗೆ 10 ವರ್ಷ ಮಗು ಬಲಿಯಾಗಿದೆ. ಮಗು ತಾಯಿ ಜೊತೆ ಶಾಲೆಗೆ ಹೋಗುವಾಗ ಮಾರುತಿನಗರ ಹತ್ತಿರ ಎಡಗಡೆ ದ್ವಿಚಕ್ರ ವಾಹನ ಬೈಕ್ ಸ್ಕಿಡ್ ಆಗಿದ್ದರಿಂದ ಬಸ್‌ನ ಚಕ್ರದಡಿ ಮಗು ಸಿಲುಕಿ ಮೃತಪಟ್ಟಿದೆ.
ಮೃತ ಮಗುವನ್ನು ತನ್ವಿ ಕೃಷ್ಣ ಎಂದು ಗುರುತಿಸಲಾಗಿದ್ದು, ಮಿಲಿನಿಯಮ್ ಶಾಲೆಯಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿತ್ತು. ತಾಯಿ ಹರ್ಷಿತಾ ಜೊತೆ ತೆರಳುವಾಗ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಬಿಎಂಟಿಸಿ ಚಾಲಕರ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಅಪಘಾತಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ದುರಂತಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಳೆದೊಂದು ವಾರದಲ್ಲಿ ನಡೆದ ಮೂರು ಘಟನೆಯಲ್ಲಿ ಇಬ್ಬರು ಬೈಕ್ ಸವಾರರಾಗಿದ್ದರೆ, ಇನ್ನೊಬ್ಬ ಬಿಎಂಟಿಸಿ ಪ್ರಯಾಣಿಕನಾಗಿದ್ದ. ಆಗಸ್ಟ್ 13 ರಂದು ರೂಪೇನ ಅಗ್ರಹಾರದ ಬಳಿ ನಡೆದ ಘಟನೆಯಲ್ಲಿ ಆಟೋಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸೈಯದ್ ಜಾಫರ್ ನಿಯಂತ್ರಣ ತಪ್ಪಿ ಬಿದ್ದಾಗ ಬಿಎಂಟಿಸಿ ಬಸ್‌ನ ಚಕ್ರ ಹರಿದು ಮೃತಪಟ್ಟಿದ್ದಾರೆ.
ಸಂಜಯನಗರದಲ್ಲಿ ಟೆಕ್ಕಿ ರೋಷನ್ ಬೈಕ್‌ನಲ್ಲಿ ಬಿಎಂಟಿಸಿ ಬಸ್ ಓವರ್‌ಟೇಕ್ ಮಾಡುವಾಗ ಬಸ್‌ಗೆ ಡಿಕ್ಕಿ ಹೊಡೆದು ಹಿಂಬದಿ ಚಕ್ರದಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಆಗಸ್ಟ್ 21 ರಂದು ಜಯನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಚಾಲಕ ಏಕಾಏಕಿ ಬಾಗಿಲು ಮುಚ್ಚಿ ಬಸ್ ಚಲಾಯಿಸಿದ್ದರಿಂದ ಪ್ರಯಾಣಿಕ ಸಂಪಂಗಿ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಅಸು ನೀಗಿದ್ದರು.