ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಬೇರೆ ಜಾತಿ ಎಂಬ ಕಾರಣಕ್ಕೆ ಯುವತಿ ಪ್ರೀತಿಸುತ್ತಿದ್ದ ಹುಡುಗನನ್ನು ಆಕೆಯ ಮನೆಯವರು ಹೊಡೆದು ಕೊಂದರೆ ಸಾವಿನಿಂದ ಆಘಾತಗೊಂಡ ಯುವತಿ ಆತನ ಶವವನ್ನೇ ಮದುವೆಯಾಗಿ ಆತನ ಮನೆಯಲ್ಲೇ ಇರುವ ನಿರ್ಧಾರ ಮಾಡಿದ್ದಾಳೆ.
20 ವರ್ಷದ ಸಕ್ಷಮ್ ಟಾಟೆ ಕೊಲೆಯಾದ ಯುವಕ. ಅಂಚಲ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಸಹೋದರರಿಂದಲೇ ಅಂಚಲ್‌ಗೆ ಸಕ್ಷಮ್ ತಾಟೆಯ ಪರಿಚಯವಾಗಿ ಪ್ರೀತಿಯಾಗಿತ್ತು. ಈ ಪ್ರೀತಿ ಅಂಚಲ್ ಕುಟುಂಬಕ್ಕೆ ತಿಳಿದು ಬೇರೆ ಜಾತಿ ಎಂಬ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧದ ನಡುವೆಯೂ ಅಂಚಲ್ ಸಕ್ಷಮ್ ತಾಟೆ ಪ್ರೀತಿ ಮುಂದುವರಿದಿತ್ತು. ಆತನನ್ನೇ ಮದುವೆಯಾಗುವುದಕ್ಕೆ ಅಂಚಲ್ ನಿರ್ಧಾರ ಮಾಡಿರುವುದು ಆಕೆಯ ಸೋದರ ಹಾಗೂ ತಂದೆಗೆ ತಿಳಿದಿತ್ತು. ತಂದೆ ಹಾಗೂ ಸೋದರರು ಸೇರಿ ಸಕ್ಷಮ್‌ಗೆ ಥಳಿಸಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಸಕ್ಷಮ್ ಕೊಲೆಯಾದ ವಿಚಾರ ತಿಳಿದ ಅಂಚಲ್ ಆತನ ಮನೆಗೆ ಹೋಗಿದ್ದಾಳೆ. ಅಂತ್ಯಸಂಸ್ಕಾರ ನಡೆಸುತ್ತಿದ್ದಾಗಲೇ ಅಂಚಲ್ ಆತನ ದೇಹಕ್ಕೆ ಅರಶಿಣ ಹಚ್ಚಿ ತನ್ನ ಹಣೆಗೆ ಸಿಂಧೂರ ಹಚ್ಚಿ ಆತನ ಮೃತದೇಹವನ್ನೇ ಮದುವೆಯಾಗಿದ್ದಾಳೆ. ತನ್ನ ಜೀವನವನ್ನು ಸಕ್ಷಮ್‌ನ ಮನೆಯಲ್ಲೇ ಪತ್ನಿಯಂತೆ ಕಳೆಯಲು ನಿರ್ಧರಿಸಿದ್ದಾಳೆ.
ಸಕ್ಷಮ್‌ನ ಕೊಲೆ ಮಾಡಿದ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲಿಸರು ಆರು ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.


