ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೇಸ್‌ಬುಕ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದ ತಿಮರೋಡಿ ಬಿಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ರಾಜೀವ್ ಕುಲಾಲ್ ನೀಡಿದ ದೂರಿನ ಅನ್ವಯ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆಯುವಾಗ ಹೈಡ್ರಾಮಾ ನಡೆದಿದೆ. ಎಂಟು ವಾಹನಗಳಲ್ಲಿ ಉಜಿರೆಯಲ್ಲಿರುವ ತಿಮರೋಡಿ ನಿವಾಸಕ್ಕೆ ತೆರಳಿದ್ದ 30 ಪೊಲೀಸರ ತಂಡ ವಶಕ್ಕೆ ಪಡೆದಿದೆ.
ಮನೆಯ ಮುಂಭಾಗ ದೊಡ್ಡಮಟ್ಟದಲ್ಲಿ ಜಮಾಯಿಸಿದ್ದ ತಿಮರೋಡಿ ಬೆಂಬಲಿಗರು ಬಂಧಿಸದಂತೆ ಆಗ್ರಹಿಸಿ ಇಲ್ಲೇ ವಿಚಾರಣೆ ನಡೆಸಿ ಎಂದು ಪಟ್ಟು ಹಿಡಿದರು. ಗಿರೀಶ್ ಮಟ್ಟಣ್ಣನವರ್ ಕಾರಣ ಕೇಳಿ ಪೊಲೀಸರೊಂದಿಗೆ ವಾಗ್ದಾದ ನಡೆಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು ಖಾಸಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ.