ರಾಜ್ಯದಲ್ಲಿ ತೀವ್ರ ಮಳೆ ಮುಂದುವರಿದಿದ್ದು, ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಜಲಾಶಯದಿಂದ ನದಿಗೆ 1,17,057 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ, ಇದರಿಂದಾಗಿ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಜಲಾಶಯಕ್ಕೆ 1,15,722 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನದಿಗೆ 1,17,057 ಕ್ಯೂಸೆಕ್ ನೀರು ಹರಿಸಲಾಗಿದೆ.
26 ಕ್ರಸ್ಟ್‌ಗೇಟ್‌ಗಳಿಂದ ನೀರು ಹರಿಸಲಾಗುತ್ತಿದೆ. ಹಂಪಿಯ ಸ್ಮಾರಕಗಳು ಮುಳುಗಡೆಯಾಗಿವೆ. ಪುರಂದರದಾಸರ ಮಂಟಪ, ಧಾರ್ಮಿಕ ವಿಧಿ ವಿಧಾನ ನೇರವೇರಿಸುವ ಮಂಟಪ, ಕಾಲು ಸೇತುವೆ, ಚಕ್ರತೀರ್ಥ, ಕೋದಂಡರಾಮ ಸ್ವಾಮಿ ದೇವಾಲಯ, ಸಾಲು ಮಂಟಪಗಳು, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿ ನಾನಾ ಸ್ಮಾರಕಗಳು ಮತ್ತು ಮಂಟಪಗಳು ಜಲಾವೃತವಾಗಿವೆ. ಬುಕ್ಕಸಾಗರ, ಕೋದಂಡ ರಾಮ ದೇವಾಲಯ ಸಮೀಪ ತೆಪ್ಪಗಳನ್ನು ನದಿಗೆ ಇಳಿಸದಂತೆ ಮೀನುಗಾರರಿಗೆ ಸ್ಥಳೀಯಾಡಳಿತ ಸೂಚನೆ ನೀಡಿದೆ. ಬೋಟಿಂಗ್ ವ್ಯವಸ್ಥೆವನ್ನೂ ಸ್ಥಗಿತಗೊಳಿಸಲಾಗಿದೆ.
ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್ ಮಾಡಿರುವುದರಿಂದ ಬಳ್ಳಾರಿ-ಗಂಗಾವತಿ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಬಳ್ಳಾರಿ-ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಕಂಪ್ಲಿ ಪಟ್ಟಣದ ನದಿ ತೀರದ ಮೀನುಗಾರರ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನದಿ ಪಾತ್ರದ ಜನ, ಜಾನುವಾರು ನದಿ ತೀರಕ್ಕೆ ತೆರಳದಂತೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ. ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದ್ದಾರೆ.