ಚಿಕ್ಕಮಗಳೂರಿನ ಕಳಸ ತಾಲೂಕಿನ ಬಸ್ತಿಗದ್ದೆ ಗ್ರಾಮದಲ್ಲಿ ಆಟೊ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿಟ್ಟ ಡೆತ್ ನೋಟ್ ಆಧರಿಸಿ ಕುದುರೆಮುಖ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಾನ್‌ಸ್ಟೇಬಲ್ ಸಿದ್ದೇಶ್ ಬಂಧಿತ ಆರೋಪಿ. ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆಟೊ ಚಾಲಕ ನಾಗೇಶ್ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದರು. ಆಟೊ ಚಾಲಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆರೋಪಿ ಕಾನ್‌ಸ್ಟೇಬಲ್ ಸಿದ್ದೇಶ್ ಗೋವಾಕ್ಕೆ ತೆರಳಿದ್ದರು. ಪೊಲೀಸರು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.
ಆ.13ರಂದು ನಾಗೇಶ್ (32) ಡೆತ್‌ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆಟೊ ಚಾಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಆರೋಪಿ ಸಿದ್ದೇಶ್ ಗೋವಾಕ್ಕೆ ತೆರಳಿದ್ದ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಾಗೇಶ್ ಸಾವಿನ ನಂತರ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಮೃತರ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಕುಟುಂಬಸ್ಥರು ಹಠ ಹಿಡಿದಿದ್ದರು.