Menu

ಸಿಂಧೂ ಜಲ ಒಪ್ಪಂದ ನೆಹರೂ ಮಾಡಿದ ದೊಡ್ಡ ಪ್ರಮಾದ: ಜೆಪಿ ನಡ್ಡಾ ಟೀಕೆ

jp nadda

ನವದೆಹಲಿ: ಪಾಕಿಸ್ತಾನದ ಜೊತೆ ಭಾರತವು 1960ರಲ್ಲಿ‌ ಮಾಡಿಕೊಂಡ ಸಿಂಧೂ ಜಲ ಒಪ್ಪಂದದ ನಿರ್ಧಾರವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮಾಡಿದ ಅತಿ ದೊಡ್ಡ ಪ್ರಮಾದಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪಾಕಿಸ್ತಾನದೊಂದಿಗೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿ ಏಕಪಕ್ಷೀಯವಾಗಿ ಸಿಂಧೂ ಜಲಾನಯನ ಪ್ರದೇಶದ ನೀರಿನ ಶೇ. 80ರಷ್ಟನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದರು. ಇದರಿಂದಾಗಿ ಭಾರತಕ್ಕೆ ಕೇವಲ ಶೇ. 20ರಷ್ಟು ಪಾಲು ಮಾತ್ರ ಸಿಕ್ಕಿತು, ಇದು ಭಾರತದ ನೀರಿನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಶಾಶ್ವತವಾಗಿ ರಾಜಿ ಮಾಡಿಕೊಂಡ ನಿರ್ಧಾರವಾಗಿತ್ತು ಎಂದು ಟೀಕಿಸಿದರು.

ಈ ಬಗ್ಗೆ ಎಕ್ಸ್​​ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಜೆಪಿ ನಡ್ಡಾ, “ಮಾಜಿ ಪ್ರಧಾನಿ ಪಂಡಿತ್ ನೆಹರು ಏಕಪಕ್ಷೀಯವಾಗಿ ಸಿಂಧೂ ಜಲಾನಯನ ಪ್ರದೇಶದ ನೀರಿನ ಶೇ. 80ರಷ್ಟು ಭಾಗವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದರು. ಇದರಿಂದಾಗಿ ಭಾರತಕ್ಕೆ ಕೇವಲ ಶೇ. 20ರಷ್ಟು ಪಾಲು ಮಾತ್ರ ಸಿಕ್ಕಿತು. ಅತ್ಯಂತ ಭಯಾನಕ ಅಂಶವೆಂದರೆ ನೆಹರು ಭಾರತೀಯ ಸಂಸತ್ತನ್ನು ಸಂಪರ್ಕಿಸದೆ ಈ ನಿರ್ಧಾರ ತೆಗೆದುಕೊಂಡರು. ಈ ಒಪ್ಪಂದಕ್ಕೆ ಸೆಪ್ಟೆಂಬರ್ 1960ರಲ್ಲಿ ಸಹಿ ಹಾಕಲಾಯಿತು. ಆದರೆ ಅದನ್ನು ಎರಡು ತಿಂಗಳ ನಂತರ ಅಂದರೆ ನವೆಂಬರ್‌ನಲ್ಲಿ ಕೇವಲ 2 ಗಂಟೆಗಳ ಸಾಂಕೇತಿಕ ಚರ್ಚೆಗಾಗಿ ಸಂಸತ್ತಿನ ಮುಂದೆ ಇಡಲಾಯಿತು” ಎಂದು ಟೀಕಿಸಿದ್ದಾರೆ.

ಇತಿಹಾಸವು ನೆಹರು ಅವರ ಆ ನಿರ್ಧಾರವನ್ನು ಏನೆಂದು ಕರೆಯಬೇಕು? ಅದು ಅವರ ಹಿಮಾಲಯನ್ ಪ್ರಮಾದವೇ ಎಂದು ಜೆಪಿ ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತನ್ನು ಕಡೆಗಣಿಸಿದ, ಹಲವು ತಲೆಮಾರುಗಳಿಂದ ಭಾರತದ ಕೈಗಳನ್ನು ಕಟ್ಟಿಹಾಕಿದ ಪ್ರಧಾನಿ ನೆಹರು. ಪ್ರಧಾನಿ ಮೋದಿಯವರ ದಿಟ್ಟ ನಾಯಕತ್ವ ಮತ್ತು ರಾಷ್ಟ್ರ ಮೊದಲು ಎಂಬ ಬದ್ಧತೆ ಇಲ್ಲದಿದ್ದರೆ ಇಂದಿಗೂ ಭಾರತ ನೆಹರು ಎಂಬ ಒಬ್ಬ ವ್ಯಕ್ತಿಯ ತಪ್ಪಾದ ಆದರ್ಶವಾದಕ್ಕೆ ಬೆಲೆ ತೆರುತ್ತಲೇ ಇರುತ್ತಿತ್ತು” ಎಂದು ನಡ್ಡಾ ಹೇಳಿದ್ದಾರೆ.

ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಪ್ರಧಾನಿ ಮೋದಿ ಕಾಂಗ್ರೆಸ್ ಮಾಡಿದ ಮತ್ತೊಂದು ಗಂಭೀರ ಐತಿಹಾಸಿಕ ತಪ್ಪನ್ನು ಸರಿಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ. ಏಪ್ರಿಲ್ 22ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಭಾರತ ಮೊದಲ ಬಾರಿಗೆ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತು.

Related Posts

Leave a Reply

Your email address will not be published. Required fields are marked *