ಧರ್ಮಸ್ಥಳ ಪ್ರಕರಣದ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಕಳೆದ ಕೆಲವು ದಿನಗಳಿಂದ ಕಾವೇರಿದ ಚರ್ಚೆ ನಡೆಯುತ್ತಿದ್ದು, ಇಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್, ‘‘ಸ್ವಾಮಿ ಮಂಜುನಾಥನನ್ನು ರಕ್ಷಿಸಿ ಅಪಪ್ರಚಾರಿಗಳನ್ನು ಶಿಕ್ಷಿಸಿ, ಸತ್ಯಮೇವ ಜಯತೇ’’ ಎಂಬ ಪ್ಲೇಕಾರ್ಡ್ ಹಿಡಿದು ಸದನದೊಳಗೆ ಪ್ರವೇಶಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯುವಂತೆ ಮತ್ತು ಅಪಪ್ರಚಾರ ಮಾಡುವವರಿಗೆ ಶಿಕ್ಷೆ ವಿಧಿಸುವಂತೆ ಕಂದಕೂರ್ ಆಗ್ರಹಿಸಿದರು. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿ ಜನರಿಗೆ ಸತ್ಯವನ್ನು ತಿಳಿಸಬೇಕೆಂದು ಆಗ್ರಹಿಸಿದ್ದಾರೆ. ಆಡಳಿತ ಪಕ್ಷ ಈ ಪ್ರಕರಣವನ್ನು ರಾಜಕೀಯವಾಗಿ ಬಳಸುತ್ತಿದೆ ಎಂದು ಆರೋಪಿಸಿದ ಶಾಸಕ, ಧರ್ಮಸ್ಥಳ ಮಂಜುನಾಥ ಎಲ್ಲ ಜನಾಂಗದವರಿಗೆ ಸೇರಿದವ. ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಸಹಿಸಲಾಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಅಪಪ್ರಚಾರ ಮಾಡುವವರನ್ನು ಸರ್ಕಾರ ಶಿಕ್ಷಿಸದೇ ಇದ್ದರೆ, ಮಂಜುನಾಥನೇ ಶಿಕ್ಷಿಸುವ ಕಾಲ ಬರಲಿದೆ. ಸರ್ಕಾರ ತೊಟ್ಟಿಲು ತೂಗಿ ಮಕ್ಕಳನ್ನು ಚಿವುಟುವ ಕೆಲಸ ಮಾಡಬಾರದು ಎಂದಿದ್ದಾರೆ.
ಎಸ್‌ಐಟಿ ಎಷ್ಟು ದಿನದಿಂದ ತನಿಖೆ ನಡೆಸುತ್ತಿದೆ. ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಅಂತ್ಯಹಾಡಬೇಕು. ಸೌಜನ್ಯ ಪರ ತನಿಖೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಮೃತದೇಹ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಮುಗಿ ಬಿದ್ದಿದ್ದಾರೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಷಡ್ಯಂತ್ರದ ಹಿಂದಿರುವವರು ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಈವರೆಗಿನ ತನಿಖೆ ಕುರಿತು ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ.