ತುಮಕೂರಿನ ಶಿರಾದ ಜ್ಯೋತಿನಗರದಲ್ಲಿ ಮದುವೆಯಾದ ಬಳಿಕವೂ ಬೇರೆ ಯುವತಿಯೊಂದಿಗೆ ಗಂಡ ಸಲುಗೆಯಿಂದ ಇರುವುದಕ್ಕೆ ಬೇಸತ್ತ ಮಹಿಳೆ ಮದುವೆಯಾದ ನಾಲ್ಕೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೃಥ್ವಿರಾಣಿ (20) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ಎಂಬಾತನನ್ನು ಮದುವೆಯಾಗಿದ್ದರು. ಇವರಿಬ್ಬರೂ ನಾಲ್ಕು ವರ್ಷ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿದ್ದರು.
ಮದುವೆಯ ಬಳಿಕ ಶಿರಾ ಟೌನ್‌ನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನನ್ನ ಪ್ರೀತಿಸಿ ಬೇರೆಯವಳನ್ನು ಮದುವೆಯಾಗಿದ್ದೀಯಾ ಎಂದು ಜೈಮಾರುತಿಗೆ ಯುವತಿಯೊಬ್ಬಳು ಬೆದರಿಕೆ ಹಾಕುತ್ತಿದ್ದಳು. ಬೆದರಿಕೆ ಹಾಕಿದ ಯುವತಿ ಬಗ್ಗೆ ಪೃಥ್ವಿರಾಣಿ ಪತಿಯನ್ನು ಪ್ರಶ್ನಿಸಿದ್ದಳು. ಇದೇ ವಿಚಾರಕ್ಕೆ ಜಗಳ ನಡೆದು ಆಕೆ ಮೇಲೆ ಪತಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಪೃಥ್ವಿರಾಣಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಹೇಳಲಾಗಿದೆ.
ಜೈಮಾರುತಿ ಪತ್ನಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ಮಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದ. ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಪೃಥ್ವಿರಾಣಿ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿ ಪತ್ತೆಯಾಗಿದ್ದಳು. ಅನುಮಾನಗೊಂಡು ಕುಟುಂಬಸ್ಥರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಜೈಮಾರುತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.