Menu

ಆರ್ಥಿಕ ನಾಯಕತ್ವ ದೇಶವನ್ನು ಮುನ್ನಡೆಸಿದರೆ ಪ್ರಜೆಗಳು ಗ್ರಾಹಕರಾಗುತ್ತಾರೆ

ನಾವು 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ನಮ್ಮ ದೇಶ ರಾಜಕೀಯ ನಾಯಕತ್ವದಿಂದ ಆರ್ಥಿಕ ನಾಯಕತ್ವದ ಕೈಗೆ ಜಾರಿರುವುದರ ಪರಿಣಾಮಗಳನ್ನು ಪತ್ರಕರ್ತರು ಪತ್ತೆ ಹಚ್ಚಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್  ಹೇಳಿದ್ದಾರೆ.

ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಮ್ಮ ಭಾರತೀಯ ಪತ್ರಿಕೋದ್ಯಮ ರೂಪಿಸಿದ್ದ ಮಾದರಿಗಳ ಮೇಲೆ ಧೂಳು ಕುಳಿತಿದೆ. ಈ ಧೂಳನ್ನು ಕೊಡವಿ ಮತ್ತೆ ನಮ್ಮ ಮಾದರಿಗಳಿಗೆ ಜೀವಕೊಡಬೇಕಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ಹೊಸ್ತಿಲಲ್ಲಿದ್ದ ನಮ್ಮ ಪತ್ರಿಕೋದ್ಯಮಕ್ಕೆ ಹಣಕಾಸಿನ‌ ಬಡತನವಿತ್ತು. ಆದರೆ ದೇಶವನ್ನು ಕಟ್ಟುವ ರಾಜಕೀಯ ಮತ್ತು ಸಾಮಾಜಿಕ ಇಚ್ಛಾಶಕ್ತಿಯಲ್ಲಿ ಶ್ರೀಮಂತಿಕೆ ಇತ್ತು. ಆದರೆ ಇಂದು ಪತ್ರಿಕೋದ್ಯಮ ಹಣಕಾಸಿನ ಬಡತನದಿಂದ ಮೇಲೆ ಬಂದಿದ್ದು ಸಾಮಾಜಿಕ ಇಚ್ಚಾಶಕ್ತಿಯ ಬಡತನಕ್ಕೆ ತುತ್ತಾಗಿದೆ. ಇದಕ್ಕೆ ದೇಶ ರಾಜಕೀಯ ನಾಯಕತ್ವದ ಕೈ ಜಾರಿ ಆರ್ಥಿಕ ನಾಯಕತ್ವದ ಕೈವಶವಾಗಿರುವುದೂ ಮುಖ್ಯ ಕಾರಣ ಎಂದು ವಿವರಿಸಿದರು.

ಮೊದಲೆಲ್ಲಾ ಆರ್ಥಿಕ ಶಕ್ತಿಗಳನ್ನು ಸರ್ಕಾರಗಳು ನಿಯಂತ್ರಿಸುತ್ತಿದ್ದವು. ಹೀಗಾಗಿ ಬ್ಯಾಂಕ್ ಗಳ ರಾಷ್ಟ್ರೀಕರಣ, ಭೂ ಸುಧಾರಣೆ, ಉಚಿತ ಶಿಕ್ಷಣ, ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣ ರಾಜ್ಯದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗಿತ್ತು. ಆದರೆ ಇಂದು ಆರ್ಥಿಕ ಶಕ್ತಿಗಳೇ ಸರ್ಕಾರಗಳನ್ನು ನಿಯಂತ್ರಿಸುತ್ತಾ, ದೇಶವನ್ನು ಮುನ್ನಡೆಸುತ್ತಿರುವುದರಿಂದ ಇಡೀ ಸಾಮಾಜಿಕ ವ್ಯವಸ್ಥೆಯೇ ತಲೆ ಕೆಳಗಾಗಿ ಪ್ರಜೆಗಳು ಕೇವಲ ಗ್ರಾಹಕರಾಗಿದ್ದಾರೆ. ನಮ್ಮದೇ ಬ್ಯಾಂಕ್ ಅಕೌಂಟಿನಿಂದ ನಮ್ಮದೇ 500 ರೂಪಾಯಿ ತೆಗೆದರೂ ಅದಕ್ಕೆ ಶುಲ್ಕ ಬೀಳುತ್ತಿದೆ. ಬಡ ಬೋರೇಗೌಡ ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಟ್ಟರೆ ತೆರಿಗೆ, ಶುಲ್ಕ, GST, ದಂಡ, ಬಡ್ಡಿ, ಚಕ್ರಬಡ್ಡಿಗಳನ್ನು ದಾಟಿಕೊಂಡೇ ವಾಪಾಸ್ ಮನೆಗೆ ಬರಬೇಕು. ಬೀಡಿ ಬೆಂಕಿಪೊಟ್ಟಣ, ಬಾಳೆ ಹಣ್ಣಿಗೂ GST ಕಟ್ಟಿಯೇ ಮನೆಗೆ ಬರಬೇಕಾದ ಪರಿಸ್ಥಿತಿ ಇದೆ. ಯಾಕೆ ಹೀಗಾಯ್ತು ಎನ್ನುವ ಪ್ರಶ್ನೆಯನ್ನು ಕೇಳಬೇಕಾದ ಪತ್ರಿಕೋದ್ಯಮಕ್ಕೆ ಮೈ ಮರೆವು ಬಂದಿರುವುದು ಅಪಾಯದ ಸಂಕೇತ ಎಂದರು.

ದೇಶವನ್ನು ರಾಜಕೀಯ ನಾಯಕತ್ವದ ಕೈಯಿಂದ, ಆರ್ಥಿಕ ನಾಯಕತ್ವ ತಮ್ಮ ಕೈಗೆ ಕಿತ್ತುಕೊಳ್ಳುವ ಮೊದಲ ಭಾಗವಾಗಿ ಪತ್ರಿಕೆಗಳನ್ನು, ಚಾನಲ್ ಗಳನ್ನು ಕಾರ್ಪೋರೇಟ್ ಶಕ್ತಿಗಳು ತಮ್ಮ ವಶಕ್ಕೆ ಪಡೆದವು. ಹೀಗಾಗಿ ಮಾಧ್ಯಮಗಳು ಕಾರ್ಪೋರೇಟ್ ಶಕ್ತಿಗಳು ತೀರ್ಮಾನಿಸಿದ್ದನ್ನು ಜನರಿಗೆ ತೋರಿಸುತ್ತಾ ಪತ್ರಕರ್ತರನ್ನು ಕಾರ್ಪೋರೇಟ್ ಶಕ್ತಿಗಳು ಕೇವಲ ಸ್ಟೆನೋಗ್ರಾಫರ್ ಗಳನ್ನಾಗಿ ಮಾಡಿಟ್ಟಿವೆ. ಹೀಗಾಗಿ ಜನರ ಅನ್ನದ ತಟ್ಟೆ, ಅಡುಗೆ ಮನೆಯ ಕಷ್ಟಗಳ ಮೇಲೆ ಕಣ್ಣಿಟ್ಟಿದ್ದ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಡ್ ರೂಮಿನ ಕಡೆಗೆ ತಿರುಗಿಸಿಟ್ಟಿದ್ದಾರೆ. ಜನರ ಹೊಟ್ಟೆ ಬಟ್ಟೆ ಕಡೆಗೆ ಕಣ್ಣಿಟ್ಟಿದ್ದ ಕ್ಯಾಮರಾಗಳು ಹೊಟ್ಟೆ ಕೆಳಗಿನ ಸೊಂಟಕ್ಕೆ ಗಂಟುಬಿದ್ದಿವೆ. ಇದು ಭಾರತೀಯ ಪತ್ರಿಕೋದ್ಯಮದ ಮಾದರಿ ಅಲ್ಲ. ನಾವೀಗ ಪತ್ರಿಕಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ನಮ್ಮ ಮಾದರಿಗಳ ಮೇಲೆ ಕುಳಿತಿರುವ ಧೂಳನ್ನು ಕೊಡವಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ದಿನಾಚರಣೆ ಆಗಲಿ, ಪತ್ರಿಕಾ ದಿನಾಚರಣೆ ಆಗಲಿ ಸಂಭ್ರಮಕ್ಕೆ ಸೀಮಿತವಾಗದೆ ಎರಡರ ಮೌಲ್ಯಗಳನ್ನೂ, ವಿಶ್ವಾಸಾರ್ಹತೆಯನ್ನು ಮತ್ತೆ ಜೀವಂತಗೊಳಿಸಿಕೊಳ್ಳಬೇಕಿದೆ. ಪತ್ರಿಕೋದ್ಯಮ ತನ್ನ‌ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ ಪತ್ರಿಕೋದ್ಯಮವೇ ದೊಡ್ಡ ಸಮಸ್ಯೆ ಆಗಿಬಿಡುವ ಅಪಾಯವಿದೆ. ಹೀಗಾಗಿ ನಮ್ಮನ್ನು ನಾವು ಗಂಭೀರ ವಿಮರ್ಷಿಸಿಕೊಳ್ಳುವ ಮೂಲಕ ಕಳೆದು ಹೋದ ನಮ್ಮ ಮಾದರಿಗಳಿಗೆ ಮರು ಜೀವ ಕೊಡುವುದೇ ಅರ್ಥಪೂರ್ಣ ಪತ್ರಿಕಾ ದಿನಾಚರಣೆ ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ನಾವೆಲ್ಲಾ ಶ್ರಮಿಸೋಣ ಎಂದು ಕರೆ ನೀಡಿದರು.

ಪ್ರತಿಭಾ ಪುರಸ್ಕೃತರಾದ ಪತ್ರಕರ್ತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಕೆವಿಪಿ, ವಿಶಗವದಲ್ಲೇ ಶ್ರೇಷ್ಠವಾದ ಜಾಗ ಅಂದರೆ ತಾಯಿಯ ಮಡಿಲು. ಆದ್ದರಿಂದ ಮಕ್ಕಳು ಹೆಚ್ಚು ಅಂಕ ಪಡೆಯುವ ಜೊತೆಗೆ ಬದುಕಿನ ಮೌಲ್ಯಗಳು, ತಂದೆ ತಾಯಿಯರ ಆರೈಕೆಯ ಮಾನವೀಯ ಜವಾಬ್ದಾರಿ, ಪ್ರೀತಿಯನ್ನು ಕೊಡಬೇಕು. ಮೊಬೈಲ್ ಗೀಳಿನಿಂದ ಹೊರಗೆ ಬಂದು ಬಾಂದವ್ಯವನ್ನು ಬೆಳೆಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲಾ, ಉದ್ಯಮಿ ಜಫ್ರುಲ್ಲಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *