ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಂತರಿಕ್ಷ ಯಾನ ಮುಗಿಸಿ ಭೂಮಿಗೆ ಹಿಂದಿರುಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ, ಕಾರ್ಯಾಚರಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಬಳಿಕ ಹುಟ್ಟೂರು ಉತ್ತರ ಪ್ರದೇಶದ ಲಖನೌಗೆ ತೆರಳಲಿದ್ದಾರೆ. ಲಖನೌ ನಿವಾಸಿಗಳು ಅವರ ಬರುವಿಕೆಗೆ ಕಾದಿದ್ದು, ‘ಭವ್ಯ ವಿಜಯ ಮೆರವಣಿಗೆ’ ಹಮ್ಮಿಕೊಂಡಿದ್ದಾರೆ.
ಆ.22-23ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಭಾರತಕ್ಕೆ ವಿಮಾನ ಹತ್ತಿ ಅದರ ಫೋಟೋ ಜತೆಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತಕ್ಕೆ ಮರಳಲು ವಿಮಾನದಲ್ಲಿ ಕುಳಿತಾಗ ನನ್ನ ಹೃದಯದಲ್ಲಿ ಮಿಶ್ರಭಾವ ಉಂಟಾಗುತ್ತಿದೆ. ಕಳೆದ ಒಂದು ವರ್ಷದಿಂದ ನನ್ನ ಬೆನ್ನಿಗೆ ನಿಂತ ಗೆಳೆಯರನ್ನು ಬಿಟ್ಟು ಬರುತ್ತಿದ್ದೇನೆ. ಕಾರ್ಯಾಚರಣೆ ಬಳಿಕ ಮೊದಲ ಬಾರಿಗೆ ಭಾರತದಲ್ಲಿರುವ ನನ್ನೆಲ್ಲ ಸ್ನೇಹಿತರು, ಕುಟುಂಬವನ್ನು ಭೇಟಿ ಮಾಡಲು ಉತ್ಸುಕನಾಗಿರುವೆ ಎಂದು ಬರೆದುಕೊಂಡಿದ್ದರು.
ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಸಿಎಂ ರೇಖಾ ಗುಪ್ತಾ, ಶುಭಾಂಶು ಶುಕ್ಲಾರನ್ನು ಬರಮಾಡಿಕೊಂಡರು.
ಶುಕ್ಲಾ ಅವರು ನಾಸಾ ನೇತೃತ್ವದ ಆಕ್ಸಿಯಂ-4 ಮಿಷನ್‌ನಲ್ಲಿ ಭಾಗವಹಿಸಿದ್ದರು. ಅವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ. 18 ದಿನ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದರು. ಜುಲೈ 15 ರಂದು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಭೂಮಿಗೆ ಇಳಿದಿದ್ದರು.
2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಎದುರು ನೋಡುತ್ತಿರುವುದರಿಂದ ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಶುಭಾಂಶು ಉತ್ಸುಕರಾಗಿದ್ದಾರೆ.