ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಶ್ವೇತಭವನದೆದುರು ಹಲವರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ವಾಷಿಂಗ್ಟನ್ ಡಿಸಿಯ ಪೊಲೀಸರನ್ನು ಫೆಡರಲ್ ನಿಯಂತ್ರಣದಲ್ಲಿ ಇರಿಸುವುದಾಗಿ ಮತ್ತು 800 ನ್ಯಾಷನಲ್ ಗಾರ್ಡ್ಸ್ಗಳನ್ನು ನಿಯೋಜಿಸುವುದಾಗಿ ಟ್ರಂಪ್ ಘೋಷಿಸಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.
ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಗಾರ್ಡ್ ಅಮೆರಿಕದ ಸಶಸ್ತ್ರ ಪಡೆಗಳೊಳಗಿನ ಮಿಲಿಟರಿ ಮೀಸಲು ಪಡೆಯಾಗಿದ್ದು, ದೇಶದ ರಕ್ಷಣಾ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದು ಸ್ಥಳೀಯ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸಲು ರಾಜ್ಯದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಬಹುದು ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳಿಗಾಗಿ ಅಥವಾ ಸಾಗರೋತ್ತರ ಯುದ್ಧ ನಿಯೋಜನೆಗಳಿಗಾಗಿ ಅಧ್ಯಕ್ಷರು ಇದನ್ನು ಬಳಸಬಹುದಾಗಿದೆ.
ಪ್ರಾಕೃತಿಕ ವಿಕೋಪಗಳ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುವುದು, ಅಶಾಂತಿಯ ಸಮಯದಲ್ಲಿ ಕಾನೂನು ಜಾರಿಯನ್ನು ಪಾಲಿಸುವಂತೆ ನೋಡಿಕೊಳ್ಳುವುದು, ಚುನಾವಣೆಗೆ ಭದ್ರತೆ ಒದಗಿಸುವುದು ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಗಾರ್ಡ್ ಕಾರ್ಯಚಟುವಟಿಕೆಯಲ್ಲಿ ಸೇರಿರುತ್ತದೆ.
ಈ ನಡುವೆ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ. ಮಾತುಕತೆ ಫಲಪ್ರದವಾಗದೇ ಇರುವುದರಿಂದ ಭಾರತದ ಮೇಲೆ ಅಮೆರಿಕ ಇನ್ನಷ್ಟು ಸುಂಕದ ಬರೆ ಎಳೆಯಲಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿ ಒಪ್ಪಂದದ ಸಾಧ್ಯತೆ ಇದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗಿನ ಮುಂದಿನ ಮಾತುಕತೆ ಒಪ್ಪಂದವನ್ನು ಅಂತಿಮಗೊಳಿಸಲಿದೆ ಎಂದು ಹೇಳಿದ್ದಾರೆ.