ತುಂಗಭದ್ರಾ ಆಡಳಿತ ಮಂಡಳಿ ನದಿ ಪಾತ್ರದ ಎಚ್ಚರಿಕೆ ನೀಡದೆ ನದಿಗೆ ನೀರು ಬಿಟ್ಟಿರುವುದರಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ತುಂಗಭದ್ರಾ ಜಲಾಶಯದಿಂದ ಏಕಾಏಕಿ ನೀರನ್ನು ನದಿಗೆ ಬಿಡಲಾಗಿದೆ.
ಜಲಾಶಯದ 7 ಕ್ರಸ್ಟ್ ಗೇಟ್ ಗಳು ಸಮಸ್ಯೆಯಿದ್ದು, ಬೆಂಡ್ ಆಗಿವೆ. ನಿನ್ನೆ 3 ಗೇಟ್ ಓಪನ್ ಮಾಡಲಾಗಿತ್ತು , ಇಂದು 14 ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿದ್ದು, ತುಂಗಾ ಮತ್ತು ಭದ್ರಾ ಜಲಾಶಯ ಹಾಗೂ ವರದಾ ನದಿಯಿಂದ ಹೆಚ್ಚಿನ ನೀರು ಹರಿದು ಬರುತ್ತಿದೆ. ಮಧ್ಯಾಹ್ನ 12 ಗಂಟೆ ನಂತರ 60 ರಿಂದ 80 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಎಚ್ಚರಿಕೆ ನೀಡಿದೆ.
ಇಂದು ಭಾನುವಾರ ಬೆಳಗ್ಗೆ 8 ಗಂಟೆಗೆ 42 ಸಾವಿರ ಕ್ಯುಸೆಕ್ ಒಳಹರಿವಿದ್ದು, ಇದು 80 ಸಾವಿರ ಕ್ಯುಸೆಕ್ ವರೆಗೆ ಏರಿಕೆಯಾಗಲಿದೆ. ತುಂಗಾ ಜಲಾಶಯದಿಂದ 34 ಸಾವಿರ, ಭದ್ರಾ ಜಲಾಶಯದಿಂದ 24 ಸಾವಿರ ಹಾಗೂ ವರದಾ ನದಿಯಿಂದ 10 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1633 ಅಡಿ, ಇಂದಿನ ಮಟ್ಟ 1625.76 ಅಡಿ, ಸಂಗ್ರಹ 78.969 ಟಿಎಂಸಿ ಸಂಗ್ರಹ ದಾಖಲಾಗಿದೆ.