ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಗೋಮಾಂಸವನ್ನು ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ ಕಿಡಿ ಕಾರಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗೋಮಾಂಸ ರಫ್ತು ಮತ್ತು ಗೋಹತ್ಯೆ ನಿಷೇಧಿಸದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದರು. ಅವರು ಈಗ ಮೂರು ಬಾರಿ ಪ್ರಧಾನಿಯಾದರು ಗೋಹತ್ಯೆಯನ್ನು ನಿಷೇಧ ಮಾಡಿಲ್ಲ. ಅವರ ಅವಧಿಯಲ್ಲಿಯೇ ಮೊದಲಿಗಿಂತ ಅಧಿಕ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದೆ. ಆರ್‌ಎಸ್‌ಎಸ್ ಈ ವಿಚಾರದಲ್ಲಿ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧಿಸುತ್ತಿಲ್ಲ. ಪ್ರಧಾನಿ ಮೋದಿ ಈಗಲಾದರೂ ಗೋಮಾಂಸ ರಫ್ತು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ, ಆದರೆ ದೇಶದಲ್ಲಿ ಗೋಮಾಂಸ ರಫ್ತು ಹೆಚ್ಚಳವಾಗುತ್ತಿದೆ. ಎಮ್ಮೆ ಮಾಂಸ ರಫ್ತು 2024ರಿಂದ 2025ರ ವೇಳೆಗೆ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 1.65 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ರಫ್ತು ದಾಖಲಾಗುವ ಸಾಧ್ಯತೆಯಿದೆ. ಇದರಿಂದ ಕೇಂದ್ರ ಸರ್ಕಾರ ಉತ್ತಮ ಆದಾಯ ಪಡೆಯುತ್ತಿದೆ. ಆದರೆ ದೇಶದಲ್ಲಿ ಮಾತ್ರ ಬಿಜೆಪಿ ಆಹಾರದ ಹಕ್ಕಿಗೆ ಧಕ್ಕೆ ತಂದು ರಾಜಕೀಯ ಮಾಡುತ್ತಿರುವುದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ ಎಂದೂ ಹೇಳಿದರು.


