ಹಲವು ಎಚ್ಚರಿಕೆಗಳ ನಡುವೆಯೂ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ಹೇಳಿಕೆ ಮುಂದುವರಿಸಿರುವ ಶಾಸಕ ಬಸವರಾಜು ವಿ ಶಿವಗಂಗಾ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಅಧಿಕಾರ ಮತ್ತಿತರ ವಿಚಾರಗಳ ಬಗ್ಗೆ ಯಾರೂ ಮಾತಾಡಬಾರದು. ಶಾಸಕರು ಪಕ್ಷದ ಶಿಸ್ತು ಪಾಲಿಸಬೇಕು. ಚೌಕಟ್ಟು ಮೀರಬಾರದು. ಅನಗತ್ಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸಬಾರದು ಎಂದು ಈ ಹಿಂದೆಯೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಆದರೂ ಶಿವಗಂಗಾ ಅವರು ಮತ್ತೇ ಹೇಳಿಕೆ ನೀಡಿರುವುದು ಪಕ್ಷದ ಶಿಸ್ತಿನ ಉಲ್ಲಂಘನೆ ಆಗುತ್ತದೆ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚನ್ನಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಬಸವರಾಜು ವಿ ಶಿವಗಂಗಾ ಅವರು ದಾವಣಗೆರೆಯಲ್ಲಿ ಸಿಎಂ ಅಧಿಕಾರ ಕುರಿತು ಹೇಳಿಕೆ ನೀಡಿರುವುದರ ಬಗ್ಗೆ ಡಿಕೆ ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ಸಂಪುಟದಿಂದ ಕೈಬಿಡಲಾಗಿದೆ. ಸ್ವಪಕ್ಷದ ವಿರುದ್ಧ ರಾಜಣ್ಣ ಹೇಳಿಕೆ ನೀಡಿದ ಕಾರಣಕ್ಕೆ ಈ ಕ್ರಮ ಕೈಗೊಂಡಿದೆ. ರಾಜಣ್ಣ ಸಿಎಂ ಸಿದ್ದರಾಮಯ್ಯಗೆ ಆಪ್ತ ಹಾಗೂ ಪ್ರಭಾವಿ ಸಚಿವರಾದರೂ ಹೈಕಮಾಂಡ್ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ಉಳಿದವರಿಗೆ ಎಚ್ಚರಿಕೆಯ ಪಾಠ ಎಂದು ಹೇಳಲಾಗಿತ್ತು.
ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಏನೂ ಮಾತನಾಡಬಾರದು ಎಂದು ಹೈಕಮಾಂಡ್ ಖಡಕ್ ಆಗಿ ಹಲವು ಬಾರಿ ಹೇಳಿತ್ತು. ಕೆಲವರು ರಾಜ್ಯದಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದರು. ಕೆಎನ್ ರಾಜಣ್ಣ ಕೂಡ ಹಲವು ಬಾರಿ ಈ ವಿಚಾರವಾಗಿ ಪ್ರಸ್ತಾಪಿಸಿದ್ದರು. ಇದನ್ನು ಪರಿಗಣಿಸಿ ಅವರನ್ನು ಸಚಿವ ಸ್ಥಾನದಿಂದ ತೆರವುಗೊಳಿಸಲಾಗಿದೆ.