ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತೀವ್ರ ಕಾವೇರಿದ್ದು, ಬಿರುಸಿನ ಮಾತು, ಚಟುವಟಿಕೆಗಳು ಗರಿಗೆದರಿವೆ, ಈ ಮಧ್ಯೆ ಚುಂಚನಗಿರಿ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸಿರುವುದು ಕುತೂಹಲ ಕೆರಳಿಸಿದೆ.
ಬೆಂಗಳೂರಿನಿಂದ ಇಂಡಿಗೊ ವಿಮಾನದ ಮೂಲಕ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸುತ್ತಿದ್ದು, ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ಮಠದ ಮೂಲಗಳು ತಿಳಿಸಿವೆ. ನಿನ್ನೆಯಷ್ಟೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡುವ ವಿಚಾರವಾಗಿ ಮಾತನಾಡಿದ್ದ ಸ್ವಾಮೀಜಿ ಇಂದು ದೆಹಲಿಗೆ ಪ್ರಯಾಣಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕುಂದೂರು ಬಿಜಿಎಸ್ ಮಠದಲ್ಲಿ ಬುಧವಾರ ಮಾತನಾಡಿದ್ದ ನಿರ್ಮಲಾನಂದ ಶ್ರೀಗಳು ಸದ್ಯದ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಸಿಎಂ ಆಕಾಂಕ್ಷಿ ಆಗಿರುವ ಡಿಕೆ ಶಿವಕುಮಾರ್ ಈ ವಿಚಾರ ನಮ್ಮ ಜೊತೆ ಮಾತನಾಡಿಲ್ಲ. ಸಾವಿರಾರು ಭಕ್ತರು ಕರೆ ಮಾಡುತ್ತಿದ್ದಾರೆ. ಎರಡೂವರೆ ವರ್ಷ ಆದ ಮೇಲೆ ಡಿಕೆಶಿ ಸಿಎಂ ಆಗಬೇಕು ಅನ್ನುವ ನಮಗೂ ಇದೆ ಎಂದು ಹೇಳಿದ್ದಾರೆ.
ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ. ರಾಜಕೀಯ ಅಸ್ಥಿರತೆಯುಂಟಾದರೆ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ರಾಜ್ಯದ ಹಿತದೃಷ್ಟಿಯಿಂದ ಹೈಕಮಾಂಡ್ ಬೇಗ ಈ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹ ಮಾಡಿದ್ದಾರೆ.


