Menu

ಎಸ್‌ಸಿಎಸ್‌ಸಿ/ಟಿಎಸ್‌ಪಿ ಕಲ್ಯಾಣ ಕಾರ್ಯಕ್ರಮಗಳಿಗೆ 38,717ಕೋಟಿ ವೆಚ್ಚ: ಸಿಎಂ ಸಿದ್ದರಾಮಯ್ಯ

siddaramiah

ಕಳೆದ ವರ್ಷ ಎಸ್‌ಸಿಎಸ್‌ಸಿ/ಟಿಎಸ್‌ಪಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ. 38793 ಕೋಟಿ ಬಿಡುಗಡೆಯಾಗಿದ್ದು, ರೂ. 38,717ಕೋಟಿ ವೆಚ್ಚ ಮಾಡಿ ಶೇ.97ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ವಿಧಾನಸೌಧ ಸಭಾಂಗಣದಲ್ಲಿ ನಡೆದ ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ರೂ. 880 ಕೋಟಿ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಎಸ್‌ಸಿಎಸ್ಪಿ/ ಟಿಎಸ್‌ಪಿ ಕಾಯ್ದೆ ಜಾರಿಗೊಂಡು 10 ವರ್ಷವಾದ ಹಿನ್ನೆಲೆಯಲ್ಲಿ ಇದರ ಅನುಷ್ಠಾನದ ಪ್ರಗತಿ ಬಗ್ಗೆ ಐಸೆಕ್ ವತಿಯಿಂದ ಮೌಲ್ಯಮಾಪನ ನಡೆಸಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಹೆಚ್ಚಿರುವ 39 ತಾಲೂಕುಗಳನ್ನು ಗುರುತಿಸಿ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ, ಆರೋಗ್ಯ, ಜೀವನಮಟ್ಟ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಮಾನದಂಡಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ. ಅಭಿವೃದ್ಧಿ ಅನುದಾನ ಬಿಡುಗಡೆಯಲ್ಲಿ ಈ ಅವಧಿಯಲ್ಲಿ ಶೇ.9.6 ರಷ್ಟು ವಾರ್ಷಿಕ ಪ್ರಗತಿ ಸಾಧಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಕಳೆದ 10 ವರ್ಷಗಳಲ್ಲಿ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯಲ್ಲಿರುವುದು ಸ್ಪಷ್ಟವಾಗಿದೆ ಎಂದು ಅವರು ನುಡಿದರು.

ಕಾಯ್ದೆ ಪ್ರಕಾರ ಪ್ರತಿವರ್ಷ ಕನಿಷ್ಠ ಶೇ.24.1 ರಷ್ಟು ಅನುದಾನ ನೀಡಬೇಕಾಗಿದೆ.  ಆದರೆ 2019-20ರ ಅವಧಿಯಲ್ಲಿ ನಿಗದಿತ ಶೇಕಡಾಕ್ಕಿಂತ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಯ್ದೆ ಜಾರಿ ಬಳಿಕ ಒಟ್ಟು ರೂ.2.97 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯೇ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ವಿನಿಯೋಗ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಜೀವನ ಮಟ್ಟ ಮತ್ತು ವಾಸಸ್ಥಳಗಳ ಅಭಿವೃದ್ಧಿಪಡಿಸುವುದು ಕಾಯ್ದೆಯ ಉದ್ದೇಶ. ಯಾವುದೇ ಕಾರಣಕ್ಕೂ ಕಾಯ್ದೆಯ ಆಶಯಕ್ಕೆ ಭಂಗ ಬರಬಾರದು. ಆಯಾ ಇಲಾಖೆಯವರು ಸಮರ್ಪಕ ಕ್ರಿಯಾ ಯೋಜನೆ ರೂಪಿಸಿ ಪರಿಶಿಷ್ಟ ಜಾತಿ/ಪಂಗಡದ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಗೆ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಬೇಕು. ಅನುಷ್ಠಾನ ಇಲಾಖೆಗೆ ಬದ್ಧತೆ ಬೇಕು. ಕಳೆದ 10 ವರ್ಷಗಳಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯವಾಗಿಲ್ಲ ಎಂದರು.

ವಿವಿಧ ಕಲ್ಯಾಣ ಯೋಜನೆಗಳಡಿ ಬ್ಯಾಂಕ್‌ಗಳು ಸಕಾಲದಲ್ಲಿ ಹಣಕಾಸು ನೆರವು ಒದಗಿಸುವುದನ್ನು ಖಾತ್ರಿಪಡಿಸಬೇಕು. ಸಾಲ ಸೌಲಭ್ಯ ಒದಗಿಸಲು ವಿಳಂಬ ಧೋರಣೆ ತೋರಿಸುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳು ಶೇ.100ರಷ್ಟು ಎಸ್‌ಸಿ/ಎಸ್‌ಟಿ ಜನಸಂಖ್ಯೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ವರ್ಷ ರೂ. 42017.51 ಕೋಟಿ ಹಂಚಿಕೆ ಮಾಡಿದ್ದೇವೆ. ಈ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡಲು ಅದಷ್ಟು ಬೇಗನೆ ಕ್ರಿಯಾ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಕಾರ್ಯ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ಬಾಕಿಯುಳಿಯಬಾರದು. ಶೇ.100ರಷ್ಟು ಪ್ರಗತಿ ಸಾಧಿಸಲೇ ಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸುವ ಕಾರ್ಯ ಆಗಬೇಕು ಎಂದರು.

ದೇವದಾಸಿ ಪುನರ್‌ವಸತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಸೆಪ್ಟಂಬರ್‌ ಮೊದಲ ವಾರದಿಂದ ಪುನರ್‌ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ದೇವದಾಸಿ ಪದ್ಧತಿಯನ್ನು ಈಗಾಗಲೇ ನಿರ್ಬಂಧಿಸಲಾಗಿದ್ದು, ಯಾವುದೇ ಕಾರಣಕ್ಕೂ ದೇವದಾಸಿ ಪದ್ಧತಿ ಮುಂದುವರೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ದೇವದಾಸಿ ಪದ್ಧತಿಯನ್ನು ತೊಡೆದು ಹಾಕಲು ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು. ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಗೆ ದೂಡುವ ಪಾಲಕರು ಸೇರಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ ಎಂದರೆ ನಾವೆಲ್ಲರೂ ತಲೆತಗ್ಗಿಸಬೇಕಾಗಿದೆ ಎಂದರು.

Related Posts

Leave a Reply

Your email address will not be published. Required fields are marked *