ಇನ್ನೆರಡು ದಿನದಲ್ಲಿ ಹೈಕಮಾಂಡ್ ಸಭೆ ನಡೆಯಲಿದ್ದು, ಆಗ ರಾಜ್ಯ ಸರ್ಕಾರದಲ್ಲಿನ ಅಧಿಕಾರ ಹಂಚಿಕೆ ಗೊಂದಲದ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ದೆಹಲಿಗೆ ಭೇಟಿ ನೀಡಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ತೆರಳುವ ಮುನ್ನ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸಭೆಯಲ್ಲಿ ಬಿಹಾರ ಫಲಿತಾಂಶ ಬಗ್ಗೆಯೂ ಚರ್ಚೆ ನಡೆಯಲಿದೆ. ಆಗ ರಾಜ್ಯದ ಗೊಂದಲ ಬಗೆಹರಿಸುತ್ತಾರೆ. ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ ಎಂದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಸಿಎಲ್ಪಿ ಆಗಿದ್ದು ಹೇಗೆ? ಬಿ ಫಾರಂ ಕೊಟ್ಟಿರುವುದು ಪಾರ್ಟಿ ಅಲ್ವಾ? ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ. ನಾನು ಮಾತಾಡಿದ ತಕ್ಷಣ ಬೆಂಕಿ ಉರಿದು ಬಿಡುತ್ತಾ? ಆಡಳಿತದ ಮೇಲೆ ಪರಿಣಾಮ ಬೀರಬಾರದು. ಎಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡಬೇಕು. ಸಿದ್ದರಾಮಯ್ಯ ನಮ್ಮ ಸಿಎಂ. ಡಿಕೆಶಿ ನಮ್ಮ ಡಿಸಿಎಂ, ಅಧ್ಯಕ್ಷರು. ಇವರ ಹೊರತಾಗಿ ಹೈಕಮಾಂಡ್ ತೀರ್ಮಾನಿಸಬೇಕು. ಹೊಸ ಅಧ್ಯಕ್ಷರ ಬಗ್ಗೆಯೂ ಅವರೇ ತೀರ್ಮಾನಿಸಬೇಕು ಎಂದು ಹೇಳಿದರು.
ಯಾರೋ ಒಬ್ಬರಿಂದ ಪಾರ್ಟಿ ಇಲ್ಲ
ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಕಷ್ಟ ಎಂಬ ವಿಚಾರವಾಗಿ ಮಾತನಾಡಿ, ಯಾರೋ ಒಬ್ಬರಿಂದ ಪಾರ್ಟಿ ಇಲ್ಲ. ಅವರಿಗಿಂತ ಮುಂಚೆಯೂ ಕಾಂಗ್ರೆಸ್ ಇತ್ತಲ್ಲ. ಅವರ ವರ್ಚಸ್ಸು ಎಲ್ಲ ಸಮುದಾಯಗಳ ಮೇಲಿದೆ. ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ ಅಲ್ವಾ? ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಸತೀಶ್ ಎಲ್ಲರೂ ಕಾರ್ಯಕರ್ತರಿಂದ ಬೆಳೆದವರು. ಕಾರ್ಯಕರ್ತರಿಂದಲೇ ನಾಯಕರು ಬೆಳೆಯುವುದು ಎಂದು ತಿಳಿಸಿದರು.
ಪರಮೇಶ್ವರ್ ಸಿಎಂ ಆಗುತ್ತಾರೆಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜಿ.ಪರಮೇಶ್ವರ್ ಹಿಂದೆ ಡಿಸಿಎಂ ಆಗಿದ್ದವರು. ಕೆಪಿಸಿಸಿ ಅಧ್ಯಕ್ಷರಾಗಿ ದೀರ್ಘಕಾಲ ಇದ್ದವರು. ಪಕ್ಷದಲ್ಲಿ ಅರ್ಹತೆ ಇರುವವರು ಬಹಳ ಇದ್ದಾರೆ. ಬಿಜೆಪಿ ಕೇಳಿ ಆಡಳಿತ ಮಾಡಲು ಆಗುತ್ತಾ? ಅಲ್ಲಿ ಸಮರ್ಥ ವಿಪಕ್ಷ ನಾಯಕರಿದ್ದಾರಾ?. ವಿಜಯೇಂದ್ರ ವಿರುದ್ದ ಅಶೋಕ್ ಅವರನ್ನು ಚೂ ಬಿಟ್ಟಿದ್ದಾರೆ. ಅವರ ಔಟ್ ಸೈಡ್ ಸಪೋರ್ಟ್ ನಮಗೆ ಯಾಕೆ ಎಂದು ಟಾಂಗ್ ಕೊಟ್ಟರು.


