Wednesday, November 26, 2025
Menu

ಸಿಎಂ ಕುರ್ಚಿ ಜಗಳದಲ್ಲಿ ರೈತರನ್ನು ಮರೆತ ಸರ್ಕಾರ: ಆರ್.ಅಶೋಕ ಆಕ್ರೋಶ

R Ashoka

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನದಾತ ರೈತರನ್ನು ಸಂಪೂರ್ಣವಾಗಿ ಮರೆತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೃದಯಹೀನ ಸರ್ಕಾರಕ್ಕೆ ಅನ್ನದಾತನ ಬದುಕಿಗಿಂತ ಅಧಿಕಾರವೇ ಮುಖ್ಯವಾಗಿದೆ. ಕರ್ನಾಟಕದ ಇತಿಹಾಸದಲ್ಲಿ ರೈತರ ನೋವಿಗೆ ಸ್ಪಂದಿಸದ ಈ ರೀತಿಯ ಸಂವೇದನಾರಹಿತ ಸರ್ಕಾರವನ್ನು ನಾನು ಈವರೆಗೆ ಕಂಡಿರಲಿಲ್ಲ. ಕೊಟ್ಟ ಮಾತಿನಂತೆ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡಬೇಕಿದ್ದ ಸರ್ಕಾರ ಇಂದು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ. ರೈತರ ಬದುಕು ನಾಶವಾದರೂ ಪರವಾಗಿಲ್ಲ, ನಮ್ಮ ಕುರ್ಚಿ ಭದ್ರವಾಗಿರಲಿ ಎನ್ನುವಂತಿದೆ ಇಬ್ಬರೂ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುರ್ಲಾಪುರದಲ್ಲಿ ಪ್ರತಿಭಟನಾ ನಿರತ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘೋರ ದುರಂತ ಸಂಭವಿಸಿತು. ಆದರೆ, ಈ ಹೃದಯಹೀನ ಸರ್ಕಾರದ ಯಾವ ಮಂತ್ರಿಯೂ ರೈತನ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಸಕ್ಕರೆ ಸಚಿವರು, ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ತಲೆ ಮರೆಸಿಕೊಂಡಿದ್ದಾರೆ. ತಮ್ಮದೇ ಸರ್ಕಾರದ ಅಸಡ್ಡೆಯಿಂದಾಗಿ ಜೀವನ್ಮರಣದ ಹೋರಾಟದಲ್ಲಿದ್ದ ರೈತನಿಗೆ ಸಾಂತ್ವನ ಹೇಳುವಷ್ಟು ಕನಿಷ್ಠ ಮಾನವೀಯತೆಯೂ ಇಲ್ಲದ ಮಂತ್ರಿಗಳು ಈ ರಾಜ್ಯಕ್ಕೆ ಬೇಕೇ? ಎಂದು ಪ್ರಶ್ನೆ ಮಾಡಿದ್ದಾರೆ.

ರೈತರ ಬೇಡಿಕೆಯಂತೆ ಮೆಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲು ಸಿಎಂ ಸಿದ್ದರಾಮಯ್ಯ ಯಾರ ಆದೇಶಕ್ಕಾಗಿ ಕಾಯುತ್ತಿದ್ದಾರೆ? ಇದಕ್ಕೂ ದೆಹಲಿ ಹೈಕಮಾಂಡ್‌ನಿಂದ ಸೂಚನೆ ಬರಬೇಕೇ? ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೇವಾಲಾ ಅವರ ಅನುಮತಿ ಪತ್ರ ಬೇಕೇ? ರೈತರ ಜೀವ ಉಳಿಸಲು ಹೈಕಮಾಂಡ್‌ನ ಆದೇಶ ಬೇಕೆ? ಎಂದು ಪ್ರಶ್ನಿಸಿದ್ದಾರೆ.

ನನ್ನ 30 ವರ್ಷದ ರಾಜಕಾರಣದಲ್ಲಿ ಇಂತಹ ರೈತ ವಿರೋಧಿ, ಸಂವೇದನಾರಹಿತ ಸರ್ಕಾರವನ್ನು ನಾನು ಕಂಡಿಲ್ಲ. ಬರ ಪರಿಹಾರ, ಹೆಚ್ಚುವರಿ ಬೆಂಬಲ ಬೆಲೆ ಇಲ್ಲ, ಸಕಾಲಕ್ಕೆ ಖರೀದಿ ಕೇಂದ್ರಗಳ ಆರಂಭವಿಲ್ಲ, ನೀರಾವರಿ ಯೋಜನೆಗಳಿಲ್ಲ ಸಂಕಷ್ಟದಲ್ಲಿರುವ ರೈತನಿಗೆ ಸ್ಪಂದನೆಯಿಲ್ಲ. ಇದೇ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ರೈತರ ಆಕ್ರಂದನವನ್ನು ನಿರ್ಲಕ್ಷಿಸಿ ಕುರ್ಚಿ ಭದ್ರಪಡಿಸಿಕೊಳ್ಳಲು ಹೊರಟಿರುವ ಈ ಸರ್ಕಾರವನ್ನು ಬುಡಮೇಲು ಮಾಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *