ಭಾರತ ತಂಡವನ್ನು 408 ರನ್ ಗಳ ಬೃಹತ್ ಅಂತರದಿಂದ ಬಗ್ಗುಬಡಿದು ದಕ್ಷಿಣ ಆಫ್ರಿಕಾ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ವೈಟ್ ವಾಷ್ ಮಾಡಿದೆ. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಸೋಲಿನ ದಾಖಲೆಯನ್ನು ಭಾರತ ಬರೆದಿದೆ.
ಗುವಾಹತಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 549 ರನ್ ಗಳ ಗುರಿ ಬೆಂಬತ್ತಿದ ಭಾರತ ತಂಡ ಪಂದ್ಯದ 5 ಹಾಗೂ ಅಂತಿಮ ದಿನವಾದ ಬುಧವಾರ 2 ವಿಕೆಟ್ ಗೆ 27 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಭೋಜನ ವಿರಾಮದ ವೇಳೆಗೆ 140 ರನ್ ಗೆ ಆಲೌಟಾಯಿತು.
ಎರಡನೇ ಇನಿಂಗ್ಸ್ ನಲ್ಲಿ ಸ್ಪಿಮನ್ ಹಾರ್ಮರ್ 6 ವಿಕೆಟ್ ಪಡೆದು ಭಾರತದ ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶಕ್ಕೂ ತಣ್ಣೀರೆರಚಿದರು. ಕೇಶವ್ ಮಹರಾಜ್ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.
2000ನೇ ಇಸವಿಯಲ್ಲಿ ಭಾರತಕ್ಕೆ ಮೊದಲ ಬಾರಿ ಪ್ರವಾಸ ಬಂದಿದ್ದ ಹ್ಯಾನ್ಸಿ ಕ್ರೊನಿಯೆ ನೇತೃತ್ವದ ತಂಡ ಭಾರತ ನೆಲದಲ್ಲಿ 2-0ಯಿಂದ ಗೆದ್ದ ನಂತರ ದಕ್ಷಿಣ ಆಫ್ರಿಕಾ ತಂಡ ಎರಡನೇ ಬಾರಿ ಈ ಸಾಧನೆ ಮಾಡಿದೆ. ಆದರೆ ಈ ಬಾರಿ 400ಕ್ಕೂ ಅಧಿಕ ರನ್ ಗಳಿಂದ ಸೋತಿರುವುದು ಭಾರತದ ಅತ್ಯಂತ ಕಳಪೆ ಸಾಧನೆಯಾಗಿದೆ.
ಭವುಮಾ 12 ಟೆಸ್ಟ್ ಗಳಲ್ಲಿ 11 ರಲ್ಲಿ ಜಯ ಸಾಧಿಸಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಬರೆದಿದ್ದಾರೆ.
ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಭಾರತ ತಂಡ ಮಾಡಿದ ಪ್ರಯೋಗ ಕೈಕೊಟ್ಟಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮುಂತಾದ ಆಟಗಾರರ ಅನುಪಸ್ಥಿತಿ ದೊಡ್ಡ ಪರಿಣಾಮ ಬೀರಿದೆ. ಅಲ್ಲದೇ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಸೂಕ್ತ ಬ್ಯಾಟ್ಸ್ ಮನ್ ಗಳನ್ನು ಆಯ್ಕೆ ಮಾಡದೇ ಇರುವುದು ಹಾಗೂ ಉತ್ತಮ ಬೌಲರ್ ಗಳ ಆಯ್ಕೆಯಲ್ಲಿ ಎಡವಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ (54) ಅರ್ಧಶತಕ ದಾಖಲಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರರಿಂದ ದೊಡ್ಡ ಹೋರಾಟ ಕಂಡು ಬರಲೇ ಇಲ್ಲ. ಗಾಯಗೊಂಡ ಶುಭಮನ್ ಗಿಲ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಸಾಯಿ ಸುದರ್ಶನ್ (14) ನಿರಾಸೆ ಮೂಡಿಸಿದರು.


