Menu

ಆಡುಗೋಡಿ ಸಿಲಿಂಡರ್ ಸ್ಫೋಟ: ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಕ್ರಮವೆಂದ ಡಿಸಿಎಂ

“ಸಿಲಿಂಡರ್ ಸ್ಫೋಟದಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕರು ಜಾಗ್ರತೆಯಿಂದ ಇರಬೇಕು, ನಿಮ್ಮ ಜೊತೆ ನಾವಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಭರವಸೆ ನೀಡಿದರು.

ಬೆಂಗಳೂರಿನ  ಆಡುಗೋಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಹಾನಿಗೀಡಾದ ಪ್ರದೇಶಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಜೊತೆ   ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಹಾನಿಗೊಂಡ ಮನೆಗಳನ್ನು ಮರು ನಿರ್ಮಾಣ‌ ಮಾಡಿಕೊಡಲಾಗುವುದು ಹಾಗೂ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಕೊಡಲಾಗುವುದು ಎಂದು ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಯಾವ ಕಾರಣಕ್ಕೆ ಘಟನೆ ನಡೆದಿದೆ ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆ” ಎಂದು ಹೇಳಿದರು.

ಬೆಂಗಳೂರಿನಲ್ಲಿ ಹೆಚ್ಚು ಸಿಲಿಂಡರ್ ಸ್ಫೋಟಗಳು ಉಂಟಾಗುತ್ತಿವೆ. ಕಾಳಸಂತೆಯಲ್ಲಿ ಅಡುಗೆ ಸಿಲಿಂಡರ್ ಮಾರಾಟ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ಇದೆಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಅನಿಲ ಸೋರಿಕೆಯಾಗಿ ಅನಾಹುತ ನಡೆದಿದೆ. ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಪರಿಹಾರ ಕಂಡು ಹಿಡಿಯಲು ನಾವು ಚರ್ಚೆ ಮಾಡುತ್ತೇವೆ” ಎಂದರು.

ಶುಕ್ರವಾರ ಸಿಲಿಂಡರ್‌ ಸ್ಫೋಟಗೊಂಡು ಬಾಲಕನೊಬ್ಬ ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ  ಮನೆ ಛಿದ್ರಗೊಂಡಿದ್ದು, ಅಕ್ಕಪಕ್ಕದ ಹಲವು ಮನೆಗಳಿಗೂ ಬಹಳಷ್ಟು ಹಾನಿಯಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Related Posts

Leave a Reply

Your email address will not be published. Required fields are marked *