ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವೃದ್ಧರ ತಲೆಗೆ ಹೊಡೆದು ಕತ್ತು ಸೀಳಿ ಕೊಲೆ ಮಾಡಿ ಹಣ, ಚಿನ್ನಾಭರಣ ದರೋಡೆಗೈದು ಪರಾರಿಯಾಗಿ ದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮನೆಯಲ್ಲಿ ವೆಂಕಟರಾಮಪ್ಪ ಮತ್ತು ಪತ್ನಿ ಆನಂದಮ್ಮ ಇಬ್ಬರೇ ವಾಸವಿದ್ದು, ವೆಂಕಟರಾಮಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಮನೆಯಲ್ಲಿ ಬಿಟ್ಟು ಆನಂದಮ್ಮ ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಿಪಿ ಅಥವಾ ಶುಗರ್ ಸಮಸ್ಯೆಯಾಗಿ ಕುಸಿದು ಬಿದ್ದು ತಲೆಗೆ ಪೆಟ್ಟಾಗಿರಬೇಕು ಎಂದು ಭಾವಿಸಿ ಅಕ್ಕಪಕ್ಕದ ಮನೆ
ಯವರನ್ನು ಕರೆದಿದ್ದಾರೆ. ಮನೆಯಲ್ಲಿನ ವಸ್ತುಗಳಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಎಲ್ಲ ಕಡೆ ಖಾರದ ಪುಡಿ ಚೆಲ್ಲಿದ್ದು, ಮನೆಯಲ್ಲಿದ್ದ ಹಣ ಮತ್ತು ಒಡೆವೆ ದರೋಡೆ ಆಗಿರುವುದನ್ನು ಗಮನಿಸಿದ ಬಳಿಕ ಕೊಲೆ ಎಂಬುದು ಗೊತ್ತಾಗಿದೆ.
ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಿದಾಗ ತಲೆಗೆ ಹಿಟ್ಟಿನ ಕೋಲಿನಿಂದ ಹೊಡೆದು, ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಗೊತ್ತಾಗಿದೆ. ವೆಂಕಟರಾಮಪ್ಪ ಹಾಗೂ ಆನಂದಮ್ಮ ದಂಪತಿಗೆ ಮೂರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡಲಾಗಿದೆ. ಇದ್ದೊಬ್ಬ ಮಗ ಕೆಲಸಕ್ಕೆಂದು ಹೋಗಿ ಬೇರೆ ಊರಿನಲ್ಲಿ ನಲೆಸಿದ್ದ. ಹೀಗಾಗಿ ದಂಪತಿ ಸೀಪುರ ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡಿದರು.
ಮನೆಯಲ್ಲಿದ್ದ ನಾಲ್ಕೈದು ಲಕ್ಷ ರೂ., ಬೆಳ್ಳಿಯ ಸಾಮಗ್ರಿ ಹಾಗೂ 90 ಗ್ರಾಂನಷ್ಟು ಚಿನ್ನದ ಒಡವೆಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.


