Wednesday, November 26, 2025
Menu

ವಿಧಾನಸಭೆ ಚುನಾವಣೆಯಲ್ಲಿ ಮದ್ದೂರಿನಿಂದ ನಾನು ಇಲ್ಲವೇ ಅಭಿಷೇಕ್‌ ಸ್ಪರ್ಧೆ ಖಚಿತ : ಸುಮಲತಾ

sumalata

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಅಥವಾ ನನ್ನ ಮಗ ಅಭಿಷೇಕ್‌ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಂಸದೆ ಸುಮಲತಾ ಹೇಳಿದ್ದಾರೆ.

ನನ್ನ ಸ್ಪರ್ಧೆ ಖಚಿತ, ಯಾವ ಕ್ಷೇತ್ರ ಎಮಬುದು ಬಿಜೆಪಿ ವರಿಷ್ಠರು ತೀರ್ಮಾನ, ಆದರೆ ಮದ್ದೂರು ಕ್ಷೇತ್ರ ನನ್ನ ಪ್ರಥಮ ಆಯ್ಕೆ. ನಾನು ಅಥವಾ ಮಗ ಅಭಿಷೇಕ್‌ ಚುನಾವಣೆಗೆ ಸ್ಪರ್ಧೆ ಮಾಡಿದರೂ ಅದು ಮದ್ದೂರಿನಿಂದಲೇ ಎಂದು ಸ್ಪಷ್ಟಪಡಿಸಿದ್ದಾರೆ.

ದೊಡ್ಡರಸಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದೆ. ಈಗ ನಾನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಚುನಾವಣೆ ವೇಳೆ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ನಿರ್ಧಾರ ಕೈಗೊಳ್ಳುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ ಆಗ ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಇಲ್ಲ ಎಂದು ಹೇಳಿದ್ದೆ. ಮದ್ದೂರು ಅಂಬರೀಷ್‌ ಅವರ ಕರ್ಮಭೂಮಿ, ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ್‌ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಅಂಬಿ ಅಭಿಮಾನಿಗಳ ಅಪೇಕ್ಷೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದ ಮಾತ್ರ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಸೈಡ್ ಲೈನ್ ಆಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಬಿಜೆಪಿಗೆ ಸೇರಿರೋದು ಪಕ್ಷದ ಮೌಲ್ಯಗಳು, ಪ್ರಧಾನಿ ಮೋದಿ ಅವರ ಮೇಲಿನ ವಿಶ್ವಾಸ ಹಾಗೂ ಅವರ ನಾಯಕತ್ವದಲ್ಲಿ ದೇಶ ಇಷ್ಟೊಂದು ಅಭಿವೃದ್ಧಿಯಾಗುತ್ತಿರುವುದನ್ನು ನೋಡಿ, ನನಗೆ ಎಲ್ಲಿಯೂ ಹೋಗಿ ಅವಕಾಶಕ್ಕಾಗಿ ಲಾಭಿ ಮಾಡುವ ಅಭ್ಯಾಸವಿಲ್ಲ. ಬಿಜೆಪಿ ನನ್ನನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನನಗೆ ಸೂಕ್ತ ಸ್ಥಾನ ಕೊಡುತ್ತದೆ. ಸಮಯ ಬಂದಾಗ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷೇತರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ನನಗೆ ಎಂಎಲ್‌ಸಿ ಸ್ಥಾನದ ಆಫರ್ ಇತ್ತು, ತಿರಸ್ಕರಿಸಿದ್ದೇನೆ. ಯಾವುದೇ ಸ್ಥಾನಮಾನಕ್ಕೆ ಆಸೆ ಪಟ್ಟು ಬಿಜೆಪಿಗೆ ಬಂದಿಲ್ಲ. ಲಾಭಿ ಮಾಡುವ ಅಭ್ಯಾಸ ನಮ್ಮ ಕುಟುಂಬದಲ್ಲೇ ಇಲ್ಲ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *