ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಮಣಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 79ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪು ಕೋಟೆಯಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ, ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿತ್ತು. ಆಪರೇಷನ್ ಸಿಂಧೂರ ಆ ಆಕ್ರೋಶದ ಪ್ರತಿಬಿಂಬವಾಗಿತ್ತು. ಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ದಾಳಿ ಮಾಡಿತು ಎಂದು ಹೇಳಿದ್ದಾರೆ.
ನಮ್ಮ ದೇಶ ದಶಕಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ. ಈಗ ನಾವು ಭಯೋತ್ಪಾದನೆ ಮತ್ತು ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ಇಂತಹ ಬೆದರಿಕೆ ಬಹಳ ವರ್ಷಗಳಿಂದ ನೋಡಿದ್ದೇವೆ. ಇದು ಮುಂದುವರಿದರೆ ಮತ್ತೆ ನಮ್ಮ ಸೇನೆ ಪ್ರತಿಕ್ರಿಯೆ ಸರಿಯಾದ ಪ್ರತಿಕ್ರಿಯೆ ನೀಡಲಿದೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದರು.
ಸಿಂಧೂ ಜಲ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾಗಿದೆ. ಭಾರತದಲ್ಲಿ ಹರಿಯುವ ನದಿ ನಮ್ಮ ಬಳಕೆಗೆ ಸಿಗುತ್ತಿಲ್ಲ. ಭಾರತದ ನೀರಿನ ಮೇಲಿನ ಅಧಿಕಾರ ಭಾರತ ಮತ್ತು ನಮ್ಮ ರೈತರದ್ದು. ರೈತರ ಹಿತ, ರಾಷ್ಟ್ರದ ಹಿತದ ಕಾರಣ ಈ ಒಪ್ಪಂದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆತ್ಮ ನಿರ್ಭರ್ ಘೋಷಣೆ ಕೇವಲ ಆರ್ಥಿಕತೆಗೆ ಸೀಮಿತವಾಗಿಲ್ಲ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆಪರೇಷನ್ ಸಿಂಧೂರನಲ್ಲಿ ಭಾರತದ ಶಸ್ತ್ರಾಸ್ತ್ರಗಳು ಅದ್ಭುತವಾಗಿ ಕೆಲಸ ಮಾಡಿವೆ. ಶತ್ರು ದೇಶಗಳು ಇವು ಎಂತಹ ಶಸ್ತ್ರಾಸ್ತ್ರಗಳು ಎಂದು ಗೊಂದಲಕ್ಕೆ ಒಳಗಾದರು ಎಂದು ಮೋದಿ ಹೇಳಿದ್ದಾರೆ.