“ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ, “ಇದು ಧರ್ಮಸ್ಥಳದ ಪರ ಅಥವಾ ವಿರುದ್ಧದ ವಿಚಾರವಲ್ಲ. ಎಲ್ಲಾ ಪ್ರಕ್ರಿಯೆ ನ್ಯಾಯಬದ್ಧವಾಗಿ ನಡೆಯಬೇಕು. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಬರಲಿದೆ ಎಂಬ ವಿಶ್ವಾಸ ನನ್ನದು. ಈ ಪ್ರಕರಣದ ವಿಚಾರವಾಗಿ ನಮ್ಮ ಗೃಹ ಸಚಿವರು ಅಧಿವೇಶನದಲ್ಲಿ ಉತ್ತರ ನೀಡುವ ಮೂಲಕ ರಾಜ್ಯದ ಮುಂದೆ ಸತ್ಯಾಂಶ ಇಡಲಿದ್ದಾರೆ” ಎಂದು ತಿಳಿಸಿದರು.
ಇಲ್ಲಿ ಷಡ್ಯಂತ್ರ ನಡೆದಿದೆಯೇ ಎಂದು ಕೇಳಿದಾಗ, “ಈ ವಿಚಾರವನ್ನು ಗೃಹ ಸಚಿವರೇ ವಿವರಿಸಲಿದ್ದಾರೆ. ಮುಖ್ಯಮಂತ್ರಿಗಳಿಗೂ ಈ ವಿಚಾರದಲ್ಲಿ ಬದ್ಧತೆ ಇದೆ. ಯಾರೂ ಕೂಡ ಸುಳ್ಳು, ಷಡ್ಯಂತ್ರ ಮೂಲಕ ಅಪಮಾನ, ಅಪಪ್ರಚಾರ ನಡೆಸುವಂತಿಲ್ಲ ಎಂದು ಸಿಎಂ ನಮಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ನಡೆಯುತ್ತೇವೆ. ಕಾನೂನು ಎಲ್ಲರಿಗೂ ಒಂದೇ. ನಾವು ಅದನ್ನು ಕಾಪಾಡಬೇಕು. ಇಲ್ಲಿ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅನಗತ್ಯವಾಗಿ ಯಾರ ತೇಜೋವಧೆ ಮಾಡುವಂತಿಲ್ಲ” ಎಂದು ತಿಳಿಸಿದರು.
“ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಧರ್ಮಸ್ಥಳದ ಆಡಳಿತ ಮಂಡಳಿ ಮೇಲೆ ಕಪ್ಪು ಚುಕ್ಕೆ ತರಲು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿದೆ” ಎಂದು ಶಿವಕುಮಾರ್ ವಿಧಾನಸಭೆ ಕಲಾಪದಲ್ಲಿ ಹಾಗೂ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಗುರುವಾರ ಹೇಳಿದ್ದರು.
“ನಾನು ಧರ್ಮಸ್ಥಳ ಕ್ಷೇತ್ರ ಹಾಗೂ ಆ ದೇವಸ್ಥಾನದ ಮೇಲೆ ನಂಬಿಕೆ ಇರುವವನು. ನನಗೆ ಧರ್ಮಾಧಿಕಾರಿಗಳ ಮೇಲೂ ನಂಬಿಕೆ ಇದೆ. ಅವರ ಆಚಾರ ವಿಚಾರಗಳ ಬಗ್ಗೆ ಅರಿವಿದೆ. ಈ ಪ್ರಕರಣದಲ್ಲಿ ಪರಿಸ್ಥಿತಿ ಏನಿದೆ ಎಂದು ಗೃಹ ಸಚಿವರು ವಿವರಣೆ ನೀಡುತ್ತಾರೆ. ನಮಗೆ ಈ ಪ್ರಕರಣದ ವಿಚಾರ ಗೊತ್ತಿದೆ. ಆದರೆ ಸರ್ಕಾರ ಎಸ್ಐಟಿ ರಚಿಸಲು ಕಾರಣವೇನು ಎಂಬುದನ್ನು ವಿವರಿಸುತ್ತಾರೆ. ಈ ವಿಚಾರವಾಗಿ ಇಲ್ಲಿ ನಾವು ನಾಲ್ಕು ಜನ ಮಾತನಾಡುವುದಷ್ಟೇ ಅಲ್ಲ. ಲಕ್ಷಾಂತರ ಭಕ್ತಾದಿಗಳು ಈ ಕ್ಷೇತ್ರ ನಂಬಿದ್ದಾರೆ. ದೇಶದಲ್ಲಿ ಅನ್ನ ದಾಸೋಹ ಆರಂಭವಾಗದೇ ಇದ್ದ ಕಾಲದಲ್ಲೇ ಈ ಕ್ಷೇತ್ರದಲ್ಲಿ ಇದನ್ನು ಆರಂಭಿಸಲಾಗಿತ್ತು. ಈ ವಿಚಾರವನ್ನು ನೀವು ರಾಜಕೀಯವಾಗಿ ತಿರುಗಿಸಬೇಡಿ” ಎಂದು ಹೇಳಿದರು.
“ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಹೈಕಮಾಂಡ್ ಎಂದು ಎಳೆದು ತರಬೇಡಿ. ಈ ಪ್ರಕರಣದಲ್ಲಿ ಕಾಂಗ್ರೆಸ್ ಯಾಕೆ ಹಸ್ತಕ್ಷೇಪ ಮಾಡುತ್ತದೆ. ಅಲ್ಲಿನ ಆಂತರಿಕ ಸಮಸ್ಯೆಯಿಂದ ಯಾವನೋ ಒಬ್ಬ ಬಂದು ಆರೋಪ ಮಾಡಿದ್ದಾನೆ. ನಿಮಗಿಂತ ಹೆಚ್ಚಾಗಿ ನಮ್ಮ ಪಕ್ಷದಲ್ಲೇ ಶಿವಲಿಂಗೇಗೌಡರು, ಅಶೋಕ್ ರೈ ಸೇರಿದಂತೆ ಅನೇಕ ಶಾಸಕರು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಧ್ವನಿ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ನಂಬಿಕೆ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ನಾಶವಾಗಬಾರದು. ಧರ್ಮಾಧಿಕಾರಿಗಳು ಮೊದಲಿನಿಂದಲೂ ಸಾಮಾಜಿಕ ಸೇವೆ, ಧಾರ್ಮಿಕ ಸೇವೆ ಮಾಡಿಕೊಂಡು ಬರುತ್ತಿದ್ದು, ಅವರ ಮೇಲೆ ನಮಗೆ ಯಾವುದೇ ಅನುಮಾನವಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅವರ ಧಾರ್ಮಿಕ ಕೆಲಸಗಳ ಬೆನ್ನಿಗೆ ನಿಲ್ಲಲು ಬದ್ಧವಾಗಿದೆ. ಕೆಲವರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೃಹ ಸಚಿವರಾಗಲಿ, ಸರ್ಕಾರವಾಗಲಿ ಸುಮ್ಮನೆ ಕೂರಲು ಸಾಧ್ಯವೇ? ಇದೆಲ್ಲವನ್ನು ಗೃಹ ಸಚಿವರು ವಿವರಿಸುತ್ತಾರೆ. ಧರ್ಮಸ್ಥಳದ ವಿರೇಂದ್ರ ಹೆಗಡೆ, ಅವರ ಪರಂಪರೆ, ದೇವಸ್ಥಾನ, ಧರ್ಮ, ಧಾರ್ಮಿಕ ವಿಚಾರದ ಬಗ್ಗೆ ನಮಗೆ ನಿಮಗಿಂತಲೂ ಹೆಚ್ಚು ಕಾಳಜಿ ನಮಗಿದೆ” ಎಂದು ತಿಳಿಸಿದರು.