ಹುಟ್ಟಿದ ನಾಲ್ಕನೇ ಮಗುವೂ ಹೆಣ್ಣಾಗಿದ್ದಕ್ಕೆ ಆಕ್ರೋಶಗೊಂಡ ಹೆತ್ತತಾಯಿ, ಮೂರು ದಿನದ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದ ನಿವಾಸಿ ಅಶ್ವಿನಿ ಹಳಕಟ್ಟಿ ಈ ಕೃತ್ಯ ಎಸಗಿದ್ದು, ಬಾಣಂತಿ ಎಂಬ ಕಾರಣಕ್ಕೆ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ನವೆಂಬರ್ 23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಅಶ್ವಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಾರನೇ ದಿನವೇ ತವರುಮನೆ ಹಿರೇಮುಲಂಗಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ತನ್ನ ತಾಯಿ ಹೊರ ಹೋದಾಗ ಅಶ್ವಿನಿ ಹಸುಗೂಸಿನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಗು ಉಸಿರಾಡುತ್ತಿಲ್ಲ ಅಂತಾ ಡ್ರಾಮಾ ಮಾಡಿದ್ದಾರೆ.
ತಕ್ಷಣ ರಾಮದುರ್ಗ ತಾಲೂಕಾಸ್ಪತ್ರೆಗೆ ಮಗು ಕರೆತರಲಾಗಿದ್ದು, ಪರಿಶೀಲಿಸಿದ ವೈದ್ಯರು ಕತ್ತು ಹಿಸುಕಿದ್ದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಅಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ್ ಅವರು ಮಗುವಿನ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಅಶ್ವಿನಿ ಕೂಡ ಬಾಣಂತಿ ಹಿನ್ನೆಲೆಯಲ್ಲಿ ಪೊಲೀಸ್ ಕಾವಲಿನಲ್ಲಿ ಅಶ್ವಿನಿಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಆರೈಕೆ ಮಾಡುತ್ತಿದ್ದಾರೆ.


