Menu

ಸ್ವಾತಂತ್ರ್ಯ ಸಂಭ್ರಮ: ಮರೆತು ಹೋದ ಬಾದಾಮಿ ಬಂಡಾಯ

“ಎಂಥ ಯುದ್ಧವೋ ಗೆಳೆಯ…
ದಶಕ ದಶಕದ ಸತ್ಯಾಗ್ರಹದ ಘೋರ,
ಬಲಿದಾನ ಸೋಪಾನದಲ್ಲಿ ಹರಿದು ಬಂದು
ಸ್ವಾತಂತ್ರ್ಯ ಸುಧೆ ನಮ್ಮದಾಗಿದೆ ಇಂದು
ಮರೆವವೇ ಅದ ತಂದ ತ್ಯಾಗಿಗಳನ್ನು ?
ಅವರ ಭಾವ ನಮ್ಮ ಬಲವಾಗಲಿ
ಅವರ ತ್ಯಾಗವೇ ನಮ್ಮ ಯೋಗವಾಗಲಿ…”

ಗೋಪಾಲಕೃಷ್ಣ ಅಡಿಗರು ಹೇಳಿರುವ ಈ ಸಾಲುಗಳಲ್ಲಿ ನಾವು ಸ್ವಾತಂತ್ರ್ಯವನ್ನು ಪಡೆದ ಬಗೆ ತುಂಬಾ ಮಾರ್ಮಿಕವಾಗಿ ಮೂಡಿ ಬಂದಿದೆ. ಭರತ ಭೂಮಿ ಶತಶತಮಾನಗಳ ಹಿಂದಿನಿಂದ ಇಂದಿನವರೆಗೆ ಅನೇಕ ಮಹಾತ್ಮರನ್ನು, ದೇಶಭಕ್ತರನ್ನು ತನ್ನ ಮಡಿಲಲ್ಲಿ ಬೆಳೆಸಿದೆ. ಈ ಹುತಾತ್ಮರು ತಾಯಿ ಭಾರತಿಯನ್ನು ಗುಲಾಮಗಿರಿಯಿಂದ ಬಿಡಿಸಲು ತಮ್ಮ ಇಡೀ ಬಾಳನ್ನೇ ಮುಡುಪಾಗಿಟ್ಟು ” ಮಾಡು ಇಲ್ಲವೆ ಮಡಿ “ಎಂಬ ಪ್ರತಿಜ್ಞೆಯಿಂದ ಕಂಕಣಬದ್ಧರಾಗಿ ಹೋರಾಡಿ ಸ್ವಾತಂತ್ರ್ಯ ಗಳಿಸಿದರು. ಪರಿಣಾಮವಾಗಿ 1947ರ ಅಗಸ್ಟ್ 15 ರಂದು ಭಾರತ ಮಾತೆ ಭರತ ಪುತ್ರರ ಸುದೀರ್ಘ ಹೋರಾಟದಿಂದ ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಳಾದಳು. ಸ್ವಾತಂತ್ರ್ಯ ಸಂಗ್ರಾಮದ ತೊರಿಯಲ್ಲಿ ಬಾದಾಮಿ ತಾಲೂಕಿನ ಸೆಲೆಗಳಿದ್ದು ಅವು ಚಿರಸ್ಮರಣೀಯವಾಗಿವೆ.

“ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವ ನೀ ತನ್ಪೆರೆನಲ್ಲ…”

ಎಂಬ ಬಾದಾಮಿ ಕಪ್ಪೆ ಅರಭಟ್ಟನ ಶಾಸನ ಅಲ್ಲಿಯ ಜನರ ವ್ಯಕ್ತಿತ್ವಕ್ಕೆ ಹಿಡಿದ ರನ್ನಗನ್ನಡಿಯಾಗಿದೆ. ಇಂಥ ಐತಿಹಾಸಿಕ ಹಿನ್ನೆಲೆಯನ್ನು ಒಡಲಲ್ಲಿಟ್ಟುಕೊಂಡ ಬಾದಾಮಿ ತಾಲೂಕು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿಶೀಷ ಕೊಡುಗೆಯನ್ನು ನೀಡದೆ ಬಿಟ್ಟಿಲ್ಲ.

ಮುಂಬೈ ಕರ್ನಾಟಕದಲ್ಲಿ ಲೋಕಮಾನ್ಯ ಟಿಳಕರಿಂದ ಪ್ರೇರಿತರಾದ ರಾಷ್ಟ್ರೀಯ ಹೋರಾಟಕ್ಕೆ ಪೂರ್ವದಲ್ಲಿ, ಸ್ವಾತಂತ್ರ್ಯಪ್ರಿಯ ವ್ಯಕ್ತಿಗಳು ಆಂಗ್ಲರ ಆಡಳಿತದ ವಿರುದ್ಧ ನಡೆಸಿದ ಹೋರಾಟಗಳು ಅವಿಸ್ಮರಣೀಯ. 1941 ರಲ್ಲಿ ಈಗಿನ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನರಸಿಂಹ ದತ್ತಾತ್ರೇಯ ಪೇಟ್ಕರ ಬ್ರಿಟಿಷರ ದಾಸ್ಯದಿಂದ ಮುಕ್ತರಾಗಲು ಹೋರಾಟ ನಡೆಸಿದರು .

“ಬೂಟು ಹ್ಯಾಟಿನ ಪಿರಂಗೇರು ಬಂದಾರೋ
ಪರದೇಶಿ ಸಕ್ಕರೆ ,ಬಿಳಿ ಬಟ್ಟೆ ತಂದಾರೋ
ನಮ್ಮ ದೇಶ ಹಾಳು ಮಾಡಿದರೆ…”

ಎಂದು ‘ಗದ್ದಾರ ‘ನಂತೆ ಬೀದಿ ಬೀದಿಗಳಲ್ಲಿ ಹಾಡುತ್ತ ಜನರನ್ನು ಸಂಘಟಿಸಿದರು .ಬ್ರಿಟಿಷ್ ಅಧಿಕಾರಿಗಳ ದಬ್ಬಾಳಿಕೆಯನ್ನು ಲೆಕ್ಕಿಸದೇ, ಸ್ವತಂತ್ತ್ಯದ ಕಹಳೆಯೂದಿದ ಧೀರ. ವಿದೇಶಿ ವಸ್ತುಗಳ ಭಹಿಷ್ಕಾರ ಹಾಗೂ ಸ್ವದೇಶಿ ಚಳುವಳಿಗಾಗಿ ಬಾದಾಮಿಯಲ್ಲಿ ಸ್ವದೇಶಿ ವ್ಯಾಪಾರೋತ್ತೇಜಕ ಸಂಸ್ಥೆಯನ್ನು ಹುಟ್ಟು ಹಾಕಲು ಪ್ರಯತ್ನಿಸಿದರು. ಇವರು ಬ್ರಿಟೀಷ್ ಸೇನಾನಿಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಬಾದಾಮಿ ಸುತ್ತಮುತ್ತಲ ಪ್ರದೇಶದಲ್ಲಿ ಅವರ ಮಿಂಚಿನ ಸಂಚಾರ ಹೆಚ್ಚಾಗಿ ಸ್ವಾತಂತ್ರ್ಯ ಕಿಡಿ ಕಿಚ್ಚಾಗಿ ಪರಿವರ್ತನಗೊಂಡಿತು. ಅವರನ್ನು ಸೆರೆ ಹಿಡಿದು ಸಾಗಿಸುತ್ತಿದ್ದಾಗ, ಬ್ರಿಟೀಷ್ ಸೇನಾನಿಗಳಿಗೆ ಚಳ್ಳೇಹಣ್ಣು ತಿನಿಸಿ, ಗುಡ್ಡದಲ್ಲಿ ಅಡ್ಡಬಿದ್ದು ಓಡಿಹೋದರು. ಅವರನ್ನು ಹಿಡಿದು ಕೊಟ್ಟವರಿಗೆ ಸರಕಾರ 10,000 ರೂ. ಗಳ ಬಹುಮಾನ ನೀಡುವದಾಗಿ ಘೋಷಿಸಿತು. ಆದರೆ ಅವರೆಂದೂ ಬ್ರಿಟೀಷರಿಗೆ ಸಿಗಲಿಲ್ಲ. ಇದು ‘ ಬಾದಾಮಿ ಬಂಡಾಯ ‘ ವೆಂದೇ ಖ್ಯಾತಿಯಾಗಿದ್ದರೂ, ಇತಿಹಾಸ ಪುಟಗಳಲ್ಲಿ ಪ್ರಾಮುಖ್ಯತೆ ಪಡೆಯದೇ ಹೋದದ್ದು ದುರ್ದೈವ. ಈ ಬಂಡಾಯವೇ ನರಗುಂದದ ಬಾಬಾಸಾಹೇಬರಿಗೆ ಸ್ಪೂರ್ತಿ ನೀಡಿತು. 1858ರ ನರಗುಂದದ ಬಂಡಾಯಕ್ಕೆ ನಾಂದಿ ಹಾಡಿತು.

” ಭಾರತ ಬಿಟ್ಟು ತೊಲಗಿ “,ಅಸಹಕಾರ ಚಳುವಳಿ, “ಧ್ವಜ ಸತ್ಯಾಗ್ರಹ “… ಹೀಗೆ ಯಾವುದೇ ಚಳುವಳಿಯಲ್ಲಾಗಲಿ ಕರ್ನಾಟಕದ ನಾನಾ ಭಾಗಗಳು ಅವಿರತವಾಗಿ ಶ್ರಮಿಸಿದ್ದರೂ, ಬಾದಾಮಿ ತಾಲೂಕಿನ ಶ್ರಮ- ಹೋರಾಟವನ್ನು ಅಲ್ಲಗಳೆಯುವಂತಿಲ್ಲ. ರಕ್ತಪಾತ, ಬ್ರಿಟೀಷರ ಗುಂಡಿಗೆ ಸಿದ್ಧರಾಗಿ ಎದೆಯೊಡ್ಡುವ ಅಂದಿನ ಸಾಹಸ, ಕಲಿಗಳ ಸಮಯ ಸ್ಪೂರ್ತಿ,ಧೈರ್ಯ ದಂಗುಗೊಳಿಸುತ್ತವೆ.” ಭಾರತವನ್ನು ಬಿಟ್ಟು ತೊಲಗಿ ” ಚಳುವಳಿಗೆ ಗಾಂಧೀಜಿಯವರು ಕರೆ ಕೊಟ್ಟ ನಂತರ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳು ಬಾದಾಮಿ ತಾಲೂಕಿನಲ್ಲಿ ವ್ಯಾಪಕವಾದುದಲ್ಲದೇ, ಚುರುಕುಗೊಂಡವು. ಆಗ ಇಲ್ಲಿ ವಿಶೇಷ ಚಟುವಟಿಕೆಗಳು ನಡೆದವು. ಈತರ ಚಟುವಟಿಕೆಗಳು ‘ಕರ್ನಾಟಕ ಪ್ಯಾಟರ್ನ ‘ಎಂದು ಪ್ರಸಿದ್ಧವಾದವು.

ಚೊಳಚಗುಡ್ಡದ ಸಿದ್ದಪ್ಪ ಮಾಳವಾಡ ಸುಭಾಸಚಂದ್ರ ಭೋಸರ ತತ್ವಗಳಿಂದ ಪ್ರೇರಿತರಾದವರು. ” ಮುಳ್ಳನ್ನು ಮುಳ್ಳಿನಿಂದಲೇ ತಗೆಯಬೇಕು “ಎಂಬುದರಲ್ಲಿ ವಿಶ್ವಾಸವಿಟ್ಟವರು. ಮಹಾರುದ್ರಪ್ಪ ಪಟ್ಟಣಶೆಟ್ಟಿ ಶಾಂತ ಸ್ವಭಾವದವರು. ಜಾಲಿಹಾಳದ ಗಿರಿತಮ್ಮನ್ನವರ ಉಗ್ರವಾದಿ. ಬಾದಾಮಿಯ ಹುಚ್ಚಪ್ಪ ಮಿಟ್ಟಲಕೋಡ, , ಚೊಳಚಗುಡ್ಡದ ಶಂಕರಗೌಡ ಶಂಕರಗೌಡ್ರ, ಮಲ್ಲಪ್ಪ ಪಡಿಯಪ್ಪನವರ, ಚನ್ನಪ್ಪ ಗಂಗಲ, ಬಸಪ್ಪ ಗಡ್ಡಿ, ಚಂದ್ರಶೇಖರಯ್ಯ ಹಿರೇಮಠ ಮುಂತಾದವರು ಸ್ವತಂತ್ರ್ಯ ಹೋರಾಟಗಾರರಿಗೆ ಸಹಾಯ ಸಹಕಾರ ನೀಡುತ್ತಿದ್ದರು.

ಇವರ ಜೊತೆಗೆ ಮುತ್ತಲಗೇರಿಯ ನಾಗಪ್ಪ ಜೋಗಿನ, ಮುಚ್ಚಳಗುಡ್ಡದ ತಿಪ್ಪಣ್ಣ ಕೂಡಿದರು. ತಾರು ತಂತಿಗಳನ್ನು ಕತ್ತರಿಸಿದರು. ಹೊಳೆ ಆಲೂರ ರೇಲ್ವೆ ಸ್ಟೇಷನ್ ಗೆ ಬೆಂಕಿ ಹಚ್ಚಿದರು. ಸರಕಾರಿ ಕಚೇರಿಗಳನ್ನು ಧ್ವಂಸ ಮಾಡಿದರು. ಈ ಚಟುವಟಿಕೆಗಳ ನೇತ್ರತ್ವವನ್ನು ಸಿದ್ದಪ್ಪ ಮಾಳವಾಡರು ವಹಿಸಿದ್ದರು. ಮುಸ್ಸಂಜೆಗೆ ಚೊಳಚಗುಡ್ಡದ ‘ ಕೋರಿ ಮಠ ‘ ದಲ್ಲಿ ಸೇರಿ ಸ್ವಯಂ ಸೇವಕರಿಗೆ ಸ್ಪೂರ್ತಿ ನೀಡುತ್ತಿದ್ದರು. ಹೀಗಾಗಿ ಕೋರಿ ಮಠ ಆಗ ಭೂಗತ ಚಟುವಟಿಕೆಗಳ ಕೇಂದ್ರ ವಾಗಿತ್ತು.

1930 ರಲ್ಲಿ ಗುಳೇದಗುಡ್ಡದಲ್ಲಿ ತೀರ್ಥಭಟ್ಟ ಜೋಶಿ, ಗುಂಡಾಭಟ್ಟ ಜೋಶಿಯವರು ತಿಪ್ಪಣ್ಣಶಾಸ್ತ್ರಿ ಕಳ್ಳಿ ಇವರ ನೇತೃತ್ವದಲ್ಲಿ ನಿತ್ಯ ಮುಂಜಾನೆ ಸಾವಿರಾರು ಸ್ವಯಂ ಸೇವಕರೊಂದಗೆ ರಾಷ್ಟ್ರಗೀತೆಗಳನ್ನು ಹಾಡುತ್ತ ಪ್ರಭಾತಪೇರಿ ನಡೆಸುತ್ತಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಉಪ್ಪನ್ನು ಸಿದ್ಧಪಡಿಸಿ ಸಭೆಯಲ್ಲಿ ಮಾರುತ್ತಿದ್ದರು. ಮಮಟಗೇರಿ, ತೋಗುಣಸಿ ಮುಂತಾದ ಊರುಗಳಿಗೆ ನೂರಾರು ಜನ ಹೋಗಿ ಈಚಲ ಗಿಡಗಳನ್ನು ಕಡಿದು ಬರುತ್ತಿದ್ದರು.

ಗುಳೇದಗುಡ್ಡದಲ್ಲಿ ನಗರ ಕಾಂಗ್ರೆಸ್ ಸಮಿತಿ ವೆಂಕಟರಮಣನ ಗುಡಿಯಲ್ಲಿ ಸ್ಥಾಪನೆಯಾಗಿ ಬಾಪುರಾವ್ ಬಾಸುತ್ಕರ್ ಅವರು ಮೊದಲನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆಗ ಅಸೆಂಬ್ಲಿ ಚುನಾವಣೆಗಳನ್ನು ಕಾಂಗ್ರೆಸ್ ಬಹಿಷ್ಕರಿಸಿದ್ದರಿಂದ, ಗುಳೇದಗುಡ್ಡದಲ್ಲಿಯೂ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿದರು. ಅದರ ಪರಿಣಾಮವಾಗಿ ಖಾಲಿ ಮತಪೆಟ್ಟಿಗೆಗಳೇ ಹೋಗಬೇಕಾಯಿತು. ಈ ಘಟನೆಯಿಂದಾಗಿ ಆಗಿನ ಬಾದಾಮಿ ತಾಲೂಕಿನ ಗುಳೇದಗುಡ್ಡವು ” ಎರಡನೇ ಬಾರ್ಡೇಲಿ ” ಎಂದು ಖ್ಯಾತಿಯನ್ನು ಪಡೆಯಿತು.

ಆಗಿನ ಕಾಲದಲ್ಲಿ ನಗರ ಸಭೆ, ಜಿಲ್ಲಾ ಲೋಕಲ್ ಬೋರ್ಡ್ ಮುಂತಾದ ಸಾರ್ವಜನಿಕ ಸಂಸ್ಥೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಬಾರದೆಂದು ಬ್ರಿಟಿಷ್ ಸರಕಾರವು ನಿರ್ಬಂಧವನ್ನು ಹೇರಿತ್ತು. ಈ ನಿರ್ಬಂಧವನ್ನು ಮುರಿದು, ಓರ್ವ ಮುಸ್ಲಿಂ ಮಹಿಳೆ- ಫಕ್ಕೀರವ್ವ ಹಂಪಿಹೊಳಿ ಧೈರ್ಯದಿಂದ ಅಂಡಗಚ್ಚಿ ಹಾಕಿ ಪೋಲೀಸ್ ಕಣ್ಗಾವಲಿನಲ್ಲಿಯೇ ನಗರಸಭೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದಳು. ನಿಜ್ಜಪ್ಪ ನಿಡಗುಂದಿ, ವೀರಭದ್ರಪ್ನ ಕದಾಂಪುರ, ಸಾಬಣ್ಣ ಸಿಂಗದ, ಶೀನಪ್ಪ ದೇವಗಿರಿಕರ, ಮಕ್ತುಮಸಾಬ ಮನಿಯಾರ, ಶಂಕ್ರಪ್ಪ ಕುಪ್ಪಸ್ತ, ಮಡಿವಾಳಪ್ಪ ಪಟ್ಟಣಶೆಟ್ಟಿ, ಶಿದ್ರಾಮಪ್ಪ ತಿಪ್ಪಾ, ಸಾಬಣ್ಣ ಅನ್ನಮ್, ಲಕ್ಷ್ಮಣಸಾ ಕಾವಡೆ, ಜಿತೂರಿ, ಕಲಬುರ್ಗಿ ಸಹೋದರರು ಮುಂತಾದವರ ತ್ಯಾಗ ಬಹಳ ದೊಡ್ಡದು. ಇವರಿಗೆ 2 -3 ಸಲ ಶಿಕ್ಷೆಯಾಗಿ ಜೇಲಿಗೆ ಹೋಗಿದ್ದಾರೆ. ಇವರು ನೀರಲಕೇರಿ ಹತ್ತೀರ ಗೂಡ್ಸಗಾಡಿ ಉರುಳಿಸಿದ ಹಾಗೂ ಜುಮನಾಳ ರೇಲ್ವೆ ಸ್ಟೇಶನ್ ಸುಟ್ಟ ಆರೋಪಿಗಳಾಗಿದ್ದರು .ಜೇಲಿಗೆ ಹೋಗುವವರಿಗೆ ಕಾಂಗ್ರೆಸ್ ಬೆಂಬಲಿಗರಾದ ಬಸಪ್ಪ ಬರಗುಂಡಿ ಹಾಗೂ ಶಂಭಣ್ಣ ಸತ್ತಿಗೇರಿ ಹಾರ ಹಾಕಿ ಜೇಲಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿದ್ದರು.

ಗುಳೇದಗುಡ್ಡದಲ್ಲಿಯ ದತ್ತಾತ್ರಯ ವ್ಯಾಯಾಮ ಶಾಲೆಯೇ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ಚಟುವಟಿಕೆಗಳ ಕೇಂದ್ರವಾಗಿತ್ತು. ಈ ವ್ಯಯಾಮಶಾಲೆಯ ಮೇಲೆ ಕಣ್ಣಿಟ್ಟಿದ್ದ ಬಾದಾಮಿಯ ಪೌಜಧಾರರಿಗೆ ಶಿದ್ರಾಮಪ್ಪ ತಿಪ್ಪಾ ಒದ್ದು ಓಡಿಸಿದ್ದರು. 1934 ರಲ್ಲಿ ಗಾಂಧೀಜಿಯವರು ಹರಿಜನ ಫಂಡಿಗಾಗಿ ಕರ್ನಾಟಕ ಪ್ರವಾಸ ಕೈಕೊಂಡಿದ್ದರು. ದೊಡ್ಡಮೇಟಿ ಅಂದಾನೆಪ್ಪನವರ ಊರಾದ ಜಕ್ಕಲಿಯಿಂದ ವಿಜಾಪುರಕ್ಕೆ ಹೋಗುವಾಗ ಹೋರಾಟಗಾರರಿಗೆ ಬಾದಾಮಿಯಲ್ಲಿ ಭಟ್ಟಿಯಾಗಿದ್ದರು. 1935 ರಲ್ಲಿ ಹಳ್ಳಿಕೇರಿ ಗುದ್ಲೆಪ್ಪನವರು ಕಾಂಗ್ರೆಸ್ಸಿನ ಪ್ರಚಾರಾರ್ಥ ಗುಳೇದಗುಡ್ಡಕ್ಕೆ ಬಂದರು. ಕ್ರಾಂತಿಯ ಕಿಚ್ಚನ್ನು ಹಚ್ಚಿ ಹೋದರು. ಹೋರಾಟಗಾರರಲ್ಲಿ ಹುರುಪು, ಹುಮ್ಮಸ್ಸು ಹೆಚ್ಚಿಸಿದರು.

ಕಟಗೇರಿ ಮುತ್ತಪ್ಪ ಚಿತ್ತರಗಿ, ಪರೂತಿಯ ಶಿವಲಿಂಗಯ್ಯಾ ಗಣಾಚಾರಿ, ದ್ಯಾಮನಗೌಡ ಗೌಡ್ರ, ಚಿಲಾಪೂರ ಬಸಪ್ಪ ಮುಂತಾದವರು ಅನೇಕ ಸ್ವಯಂ ಸೇವಕರೊಂದಿಗೆ ಶಿರೂರ ಬಾಗಲಕೋಟೆ ನಡುವಿನ ತಾರಿನ ಕಂಬಗಳನ್ನು ಕಡಿದು ಹಾಕಿದರು. ಹೋರಾಟ ಹೊಸ ಹೊಸ ತಿರುವುಗಳನ್ನು ತಗೆದುಕೊಂಡಿತು. ಬಾದಾಮಿ ತಾಲೂಕಿನ ಚಳುವಳಿಯ ಸೂತ್ರದಾರರು ಚನಬಸಪ್ಪ ಅಂಬಲಿಯವರೇ ಆಗಿದ್ದರು. ಭೂಗತ ಕೆಲಸ ಮಾಡುವಾಗ ಚಳುವಳಿಗಾರರೆಲ್ಲ ಸಂಜೆ ವೇಳೆಗೆ ಸೇರುತ್ತಿದ್ದರು. ಬನಶಂಕರಿ ದೇವಸ್ಥಾನದ ಸರಸ್ವತಿ ಹಳ್ಳ , ಮಲಪ್ರಭಾ ನದಿಯ ದಂಡೆಯ ಹಸುರಿನ ಮಧ್ಯದಲ್ಲಿ ಬೆಳ್ಳಕ್ಕಿ ಹಿಂಡುಗಳಂತೆ ಕೂಡುತ್ತಿದ್ದರು. ತಂದಿಟ್ಟ ಬಾಳೆಹಣ್ಣು, ಉಂಡಿ, ಬೆಂಡು ಬೆತ್ತಾಸ, ಚುರುಮರಿ ತಿಂದು ಮಾಯವಾಗಿ ಬಿಡುತ್ತಿದ್ದರು.

“ಬ್ರಿಟಿಷ್ ರ ಗುಂಡಿನಿಂದ ನಾನು ಸತ್ತರೂ ಚಿಂತೆಯಿಲ್ಲ. ಅವರ ಒಂದು ಗುಂಡು ನನ್ನಿಂದ ಹಾಳಾಯಿತಲ್ಲ ಎನ್ನುವ ಆತ್ಮಸಂತೋಷ ನನ್ನಲಿದೆ “ಎನ್ನುವ ಗಂಡೆದೆಯ ಬಂಟ ಮಾಳವಾಡ ಸಿದ್ದಪ್ಪನವರು. ಇವರ ಭೂಗತ ಚಟುವಟಿಕೆಗಳಿಗೆ ಸಿಡಿಮಿಡಿಗೊಂಡ ಬಿಳಿಯರು ಇವರನ್ನು ಹಿಡಿದು ಕೊಟ್ಟವರಿಗೆ 5000 ರೂ.ಗಳ ಬಹುಮಾನ ಘೋಷಿಸಿದ್ದರು. ಅವರಿಗೆ ಸೆರೆಮನೆಯೇ ಅರಮನೆಯಾಗಿತ್ತು.

ಹೀಗೆ ವ್ಯಾಪಕ ಜನಬೆಂಬಲದ ಮೂಲಕ ಬ್ರಿಟಿಷ್ ಆಳ್ವಿಕೆಯನ್ನು ಅಂತ್ಯಗೊಳಿಸಿದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನ ವಿಶಿಷ್ಟವಾದ ಬಾದಾಮಿ ತಾಲೂಕಿನ ಸಮಸ್ತ ಜನತೆಯು ಧನ್ಯ ಭಾವದಿಂದ ಸ್ಮರಿಸುತ್ತದೆ.

-ಡಾ.ಕರವೀರಪ್ರಭು ಕ್ಯಾಲಕೊಂಡ, ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ , ಬಾದಾಮಿ. 587201
ಬಾಗಲಕೋಟೆ, ಮೊ : 9448036207

Related Posts

Leave a Reply

Your email address will not be published. Required fields are marked *