ಕಲಬುರಗಿ ಶರಣ ಬಸವೇಶ್ವರ ಸಂಸ್ಥಾನದ 8ನೇ ಪೀಠಾಧ್ಯಕ್ಷ ಶರಣಬಸಪ್ಪ ಅಪ್ಪಾ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ಆಗಿತ್ತು. ವಯೋಸಹಜ ಕಾಯಿಲೆ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿ ಅವರು ಜುಲೈ ಕೊನೆ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 14ರ ರಾತ್ರಿ ಅಸು ನೀಗಿದ್ದಾರೆ.
ಉತ್ತರ ಕರ್ನಾಟಕದ ಜನರ ಕಡೆಯಿಂದ ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯಿಸಿಕೊಳ್ಳುತ್ತಿದ್ದ ಶರಣ ಬಸಪ್ಪ ಅಪ್ಪಾ ಅವರ ಅಂತಿಮ ಇಚ್ಛೆಯಂತೆ ಅವರನ್ನು ಆ. 14ರಂದು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಮಠದ ಆವರಣದಲ್ಲಿರುವ ಶರಣ ಬಸವೇಶ್ವರ ಸ್ವಾಮಿಯ ದರ್ಶನ ಮಾಡಿಸಲಾಗಿತ್ತು. ಬಳಿಕ ಅವರನ್ನು ಮಹಾಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು.
.ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ತರ ಕಡುಗೆ ನೀಡಿರುವ ಶರಣಬಸಪ್ಪ ಅಪ್ಪಾ ಶರಣಬಸವೇಶ್ವರ ವಿಶ್ವವಿದ್ಯಾಲಯ ಸೇರಿದಂತೆ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶರಣಬಸವೇಶ್ವರ ಸಂಸ್ಥಾನವು ದಾಸೋಹಕ್ಕೂ ಹೆಸರುವಾಸಿಯಾಗುವಲ್ಲಿ ಇವರ ಕೊಡುಗೆ ಅನನ್ಯ.
1935ರ ನ. 14ರಂದು ಜನಿಸಿದ್ದ ಅವರು ತತ್ವಶಾಸ್ತ್ರದಲ್ಲಿ ಪದವೀಧರರಾಗಿದ್ದ ಅವರು, 1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಕೋಮರಾ ಅವರಿಗೆ ಐವರು ಹೆಣ್ಣು ಮಕ್ಕಳು, ಎರಡನೇ ಪತ್ನಿ ದಾಕ್ಷಾಯಿಣಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, 82ನೇ ವಯಸ್ಸಿಗೆ ದಾಕ್ಷಾಯಿಣಿ ಅವರಿಂದ ಪುತ್ರನ ಜನವಾಗಿತ್ತು. ಆ ಮಗುವಿಗೆ 2 ವರ್ಷ ವಯಸ್ಸಾಗಿದ್ದಾಗ 2019ರ ಡಿ. 23ರಂದು ಶರಣ ಬಸವೇಶ್ವರ ಸಂಸ್ಥಾನಕ್ಕೆ ಉತ್ತರಾಧಿಕಾರಿ ಪಟ್ಟ ಕಟ್ಟಲಾಗಿತ್ತು.
ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು ಶರಣಬಸಪ್ಪ ಅಪ್ಪಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.