ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆದೇಶಿಸಿದ ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿ ಎ ೧ ಆರೋಪಿ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ದರ್ಶನ್ ಆಪ್ತ ಪ್ರದೋಷ್ ಅವರನ್ನೂ ಬಂಧಿಸಲಾಗಿದೆ. ದರ್ಶನ್ ಇಂದು ಸಂಜೆ ಕೋರ್ಟ್ಗೆ ಶರಣಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಆರ್ಆರ್ ನಗರ ನಿವಾಸಕ್ಕೆ ತೆರಳಿದ ಪೊಲೀಸರು, ಆರೋಪಿ ಪವಿತ್ರಾ ಗೌಡ ಅವರನ್ನು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಪವಿತ್ರಾ ಗೌಡ ದೇವರಿಗೆ ಪೂಜೆ ಸಲ್ಲಿಸಿದ್ದರು. ಮನೆಯಲ್ಲಿ ತುಳಸಿ ಗಿಡಕ್ಕೂ ಪೂಜೆ ಮಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪವಿತ್ರಾ ಗೌಡ, ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿದ್ದ ಆಕೆ ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯನ್ನು ಸತ್ಯ ಹೊಂದಿರುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ಬರೆದುಕೊಂಡಿದ್ದರು.
ತೀರ್ಪು ಹೊರಬರುತ್ತಿದ್ದಂತೆ ಮನೆಯಲ್ಲಿ ಪವಿತ್ರಾ ಗೌಡ ತಾಯಿ ಎದುರು ಅತ್ತಿದ್ದಾರೆ. ಮನೆ ಬಳಿ ಪೊಲೀಸರು ಬಂಧನಕ್ಕೆ ಕಾದು ನಿಂತು, ಬಾಗಿಲು ತೆರೆದಂತೆ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.