Tuesday, November 25, 2025
Menu

ರಾಜ್ಯ ಸರ್ಕಾರದ ಸಾಧನೆಗಳನ್ನು ತನ್ನದೆಂದು ಸಂಭ್ರಮಿಸುವ ಕೇಂದ್ರ: ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಜಲಜೀವನ್ ಮಿಷನ್ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆ, ಕರ್ನಾಟಕದ ಮಟ್ಟಿಗೆ ಕೇಂದ್ರ ತಿರಸ್ಕೃತ ಯೋಜನೆ ಎನ್ನಬಹುದು. ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ಅನುಸರಿಸುವ ಮಲತಾಯಿ ಧೋರಣೆ ಹೇಗಿದೆ ಎಂದು ನೋಡುವುದಾದರೆ 2024-25ನೇ ಆರ್ಥಿಕ ಸಾಲಿನಲ್ಲಿ JJM ಯೋಜನೆಗಾಗಿ ₹3,804,41 ಕೋಟಿಯನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿತ್ತು. ಬಿಡುಗಡೆಯಾದ ಮೊತ್ತ ಕೇವಲ ₹570,66 ಕೋಟಿ ಎಂದು ತಿಳಿಸಿದ್ದಾರೆ.

ಯೋಜನೆಯ ಜಾರಿಗಾಗಿ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಿದೆ, ಈ ಹಿಂದೆಯೂ ಜಲ್‌ ಜೀವನ ಮಿಶನ್‌ ಯೋಜನೆಯ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಒತ್ತಾಯಿಸಿದ್ದರು, ಈಗಲೂ ಮತ್ತೊಮ್ಮೆ ಒತ್ತಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ರಾಜ್ಯದ ಆರ್ಥಿಕ ಪ್ರಗತಿಗೆ ಕೇಂದ್ರದಿಂದ ಇಷ್ಟೊಂದು ಪೆಟ್ಟು ಬೀಳುತ್ತಿದ್ದರೂ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕರು ಕರ್ನಾಟಕದ ಪರವಾಗಿ ಧ್ವನಿ ಎತ್ತುವ, ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡದಿರುವುದು ರಾಜಕೀಯ ಮತ್ತು ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದಿದ್ದಾರೆ. ಬಿಜೆಪಿ ಪಕ್ಷದವರಿಗೆ ನಿಜಕ್ಕೂ ರಾಜ್ಯದ ಪರ ಕಾಳಜಿ ಇದ್ದರೆ ಸರ್ಕಾರದ ಒತ್ತಾಯಕ್ಕೆ ದನಿಗೂಡಿಸಿ ಬದ್ಧತೆಯನ್ನು ನಿರೂಪಿಸಲಿ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ನೋಂದಣಿ ಆಗದ ಎನ್‌ಜಿಒ, ದೇಶ ಸೇವೆ ಸಲ್ಲಿಸುವುದಾಗಿ ಹೇಳಿ ತೆರಿಗೆ ತಪ್ಪಿಸಿಕೊಳ್ಳುವ ಇವರ ಮಾತು ಕೇಳಲು ನಾವೇನು ಆರ್‌ಎಸ್‌ಎಸ್‌ ಗುಲಾಮರಾ, ಸರ್ಕಾರದವರೇನು ಅವರ ಆಳು ಮಕ್ಕಳಾ ಎಂದು ಪ್ರಿಯಾಂಕ್‌ ಕಿಡಿ ಕಾರಿದ್ದಾರೆ. ಆ ಸಂಸ್ಥೆ ನಿಜವಾಗಿಯೂ ದೇಶ ಸೇವೆ ಸಲ್ಲಿಸುತ್ತಿದ್ದರೆ ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು, ನೋಂದಣಿ ಆಗದ ಈ ಸಂಸ್ಥೆ ಮುಖ್ಯಸ್ಥರಿಗೆ ಪ್ರಧಾನಿ, ಗೃಹ ಸಚಿವರಿಗೆ ನೀಡುವ ಪ್ರೊಟೋಕಾಲ್‌ ಭದ್ರತೆ ಯಾಕೆ ನೀಡಬೇಕು ಎಂದೂ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Related Posts

Leave a Reply

Your email address will not be published. Required fields are marked *