ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಎಲ್ಲಾ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಆದೇಶಿಸಿದೆ.
ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಬಾರದು. ಯಾರು ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಇನ್ಮುಂದೆ ಯಾವುದೇ ಪೋಟೊ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಆರೋಪಿ ಜೈಲಿ ನಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಇದು ಲ್ಯಾಂಡ್ ಮಾರ್ಕ್ ತೀರ್ಪು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ.ಜೆ.ಬಿ ಪರ್ದಿವಾಲಾ ಮತ್ತು ನ್ಯಾ.ಆರ್ ಮಹದೇವನ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿ ಪ್ರಕರಣದ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶ ಪ್ರಕಟಿಸಿದೆ.
ಕಳೆದ ವರ್ಷ ಜೂನ್ 8ರಂದು ನಟ ದರ್ಶನ್, ಪವಿತ್ರಾ ಗ್ಯಾಂಗ್ನಿಂದ ರೇಣುಕಾಸ್ವಾಮಿಯ ಕೊಲೆ ನಡೆದಿದ್ದು, ಜೂನ್ 9ರಂದು ಸುಮನಹಳ್ಳಿ ರಾಜಕಾಲುವೆ ಬಳಿ ಶವ ಪತ್ತೆಯಾಗಿತ್ತು. ಜೂನ್ ೧ರಂದು ದರ್ಶನ್ ಮತ್ತು ಪವಿತ್ರಾ ಅವರನ್ನು ಪೊಲೀಸರು ಬಂಧಿಸಿದ್ದರು.
ಜೂನ್ 15 ರಂದು ಕೋರ್ಟ್ಗೆ ಹಾಜರುಪಡಿಸಿ, ಜೂನ್ 20ರವರೆಗೆ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಜೂನ್ 22ರಂದು ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸಿ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಸೆಪ್ಟೆಂಬರ್ 3ರಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಅಕ್ಟೋಬರ್ 14ರಂದು ಅನಾರೋಗ್ಯ ಕಾರಣ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅಕ್ಟೋಬರ್ 30 ರಂದು ಮಧ್ಯಂತರ ಜಾಮೀನು ಮಂಜೂರಾಗಿ ಜೈಲಿನಿಂದ ಬಿಡುಗಡೆಯಾಗಿತ್ತು. 2024 ಡಿಸೆಂಬರ್ 13ರಂದು ದರ್ಶನ್ಗೆ ರೆಗ್ಯುಲರ್ ಬೇಲ್ ಮಂಜೂರು ಆಗಿತ್ತು. 2025 ಜನವರಿ 6ರಂದು ಜಾಮೀನು ರದ್ದತಿ ಕೋರಿ ಮೇಲ್ಮನವಿ ಸಲ್ಲಿಕೆಯಾಗಿತ್ತು.