ಬೆಂಬಲಿತ ಶಾಸಕರ ಸಹಿ ಪಡೆಯಲೆಂದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರಪ್ಪನ ಅಗ್ರಹಾರದ ಜೈಲಿಗೂ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಕುದುರೆ ವ್ಯಾಪಾರ ಬಲು ಜೋರಾಗಿದೆ. ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿರುವ ಕುದುರೆ ವ್ಯಾಪಾರದ ಮಾತುಗಳಲ್ಲಿ ಸತ್ಯವಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ 10-12 ಮಂದಿ ಶಾಸಕರ ಬೆಂಬಲವಿದೆ ಎಂದು ಮಾಧ್ಯಮಗಳಲ್ಲೇ ಬರುತ್ತಿತ್ತು. ಈಗ ಏಕಾಏಕಿ 70 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ. ಕೋಟಿ ಕೋಟಿ ರೂಪಾಯಿ ಕೊಟ್ಟು ಶಾಸಕರ ಸಹಿ ಪಡೆದಿದ್ದಾರೆ ಎಂದರು.
ಕಾಂಗ್ರೆಸ್ನ ಬಂಡಾಯ ಶಾಸಕರೊಂದಿಗೆ ಕೈ ಜೋಡಿಸಿ ಬಿಜೆಪಿ ಸರ್ಕಾರ ರಚನೆ ಮಾಡಲ್ಲ. ನಾವು ಮತದಾರರ ಬಳಿ ಹೋಗಿ ಗೆದ್ದು ಸರ್ಕಾರ ಮಾಡುತ್ತೇವೆ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ರಾಜ್ಯದ ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಈಗಾಗಲೇ ಸತ್ತು ನೆಲಕಚ್ಚಿದೆ. ಬಿಜೆಪಿ ಶಾಸಕರು ಆ ಪಕ್ಷದ ಕಡೆ ಮುಖ ಮಾಡಲ್ಲ ಎಂದು ಹೇಳಿದರು.
ಕುದುರೆ ವ್ಯಾಪಾರ ಡೀಲ್ ಆದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಡಲ್ ಆಗಿದ್ದಾರೆ. ನಾನೇ ಐದು ವರ್ಷ ಮುಖ್ಯಮಂತ್ರಿ. ಮುಂದಿನ ಎರಡು ಬಜೆಟ್ ನಾನೇ ಮಂಡಿಸುತ್ತೇನೆ. ನನಗೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲವಿದೆ. ಡಿಕೆ ಶಿವಕುಮಾರ್ಗೆ ಶಾಸಕರ ಬೆಂಬಲ ಇಲ್ಲ ಎನ್ನುತ್ತಿದ್ದರು. ಈಗ ನೋಡಿದರೆ, ಹೈಕಮಾಂಡ್ ಹೇಳಿದಂತೆ ನಾನೂ, ಡಿಕೆ ಶಿವಕುಮಾರ್ ಕೇಳಬೇಕು ಎಂದಿ ದ್ದಾರೆ, ಇದರ ಅರ್ಥವೇನು ಎಂದು ಅಶೋಕ ಪ್ರಶ್ನಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರಿಗಷ್ಟೇ ಅಧ್ಯಕ್ಷರು. ಅವರು ಕುಳಿತಿರುವ ಚೇರಿಗೆ ಪವರ್ ಇಲ್ಲ. ಅವರು ಪರಾವಲಂಬಿ ಎಂದು ಲೇವಡಿ ಮಾಡಿದರು.


