ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದ್ದು, ಮುಂದಿನ ನಾಲ್ಕು ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್,ಬೆಳಗಾವಿ, ವಿಜಯಪುರ,ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಗಾಳಿಯು ಗಂಟೆಗೆ 40-50ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಲ್ಲಿ ಇನ್ನು ಎರಡು ದಿನ ಮೋಡ ಕವಿದ ವಾತವರಣದ ಜೊತೆ ತುಂತುರು ಮಳೆ ಮುಂದುವರಿಯಲಿದೆ. ಮಳೆ ಜೊತೆಗೆ ಚಳಿಯೂ ಇರಲಿದೆ.
ಕಲಬುರಗಿ ಹಾಗೂ ತೆಲಂಗಾಣದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಕಲಬುರಗಿಯ ಕಾಗಿಣಾ ನದಿಗೆ ಒಳಹರಿವು ಹೆಚ್ಚಳಗೊಂಡಿದೆ. ಸೇಡಂ ತಾಲೂಕಿನ ಸಂಗಾವಿ(ಟಿ) ಗ್ರಾಮದ ಸೇತುವೆ ಸಂಪೂರ್ಣ ಮುಳುಗಡೆಯಾಗಿ
ಸಂಗಾವಿ(ಟಿ) ಹಾಗೂ ಸೇಡಂ ರಸ್ತೆ ಸಂಚಾರ ಬಂದ್ ಆಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.