ಧರ್ಮಸ್ಥಳ ಪ್ರಕರಣದ ಅನಾಮಿಕ ಯಾರು? ಅವರ ಹಿಂದೆ ಯಾರಿದ್ದಾರೆ ಎನ್ನುವುದನ್ನು ನೋಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಅನಾಮಿಕ ಹೇಳಿದ ಸ್ಥಳಗಳನ್ನು ಹುಡುಕಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಭಯಾನಕ ಕೊಲೆಗಳು ಆಗಿದೆ ಎಂದು ಹೇಳುತ್ತಿದ್ದರು.ಅದರಿಂದಾಗಿ ಸರ್ಕಾರ ತೀರ್ಮಾನ ಮಾಡಿ ಎಸ್ಐಟಿ ರಚನೆ ಮಾಡಿದೆ. ಇವರ ಉದ್ದೇಶ ಏನು? ಯಾವುದೇ ಸಾಕ್ಷಿ ಇಲ್ಲದೇ ವೈಭವೀಕರಣ ಏಕೆ ಮಾಡಿದ್ರು ಎಂಬುದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.
ಜನರನ್ನು ಗಾಬರಿಗೊಳಿಸುವ ಕೆಲಸ ಮಾಡಲಾಗಿದೆ. ಎಸ್ಐಟಿ ನಿಷ್ಪಕ್ಷಪಾತ ತನಿಖೆ ಮಾಡಿದ್ದಾರೆ. ಗೃಹ ಸಚಿವರು ಸದನದಲ್ಲಿ ಉತ್ತರ ಕೊಡಲಿದ್ದಾರೆ, ಅಗೆಯುವುದನ್ನು ಮುಂದುವರೆಸಬೇಕಾ ಎಂಬುದರ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿಯವರು ಧರ್ಮಸ್ಥಳ ವಿಚಾರದಲ್ಲೂ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಬಿಜೆಪಿಯವರು ನ್ಯಾಯಯುತ ತನಿಖೆಗೆ ಸಹಕಾರ ನೀಡಲಿ. ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ಅಗೆತ ಮುಂದುವರಿಸುವ ಬಗ್ಗೆ ಸಿಎಂ, ಗೃಹ ಸಚಿವರು ನಿರ್ಧಾರ ಮಾಡಲಿದ್ದಾರೆ ಎಂದರು.
ನಾಯಿ ಕಡಿತ ದೊಡ್ಡ ಸಮಸ್ಯೆ: ಬೀದಿ ನಾಯಿಗಳ ವಿಚಾರವಾಗಿ ಸುಪ್ರಿಂ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿ, ನಾಯಿ ಕಡಿತ ಒಂದು ಸಮಸ್ಯೆ, ಪ್ರತಿವರ್ಷ ಸಾವಿರಾರು ಜನರು ನಾಯಿ ಕಡಿತಕ್ಕೊಳಗಾಗುತ್ತಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿ ತೊಂದರೆಯಾಗುತ್ತಿದೆ. ಈ ವಿಚಾರವಾಗಿ ಬಿಬಿಎಂಪಿ, ಮಹಾನಗರ ಪಾಲಿಕೆಗಳು ಗಮನ ಹರಿಸಬೇಕು ಎಂದು ಹೇಳಿದರು.
ಗುಂಡಿ ತೋಡುವುದು ನಿಲ್ಲಿಸಲಿ: ಧರ್ಮಸ್ಥಳ ಪ್ರಕರಣ ವಿಚಾರವಾಗಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಧರ್ಮಸ್ಥಳ ವಿಚಾರವಾಗಿ ಗೊಂದಲ ಇದ್ದಾಗಿಂದಲೂ ನೋಡಿದ್ದೇವೆ. ಸೌಜನ್ಯ ಕೇಸ್ ಇದ್ದಾಗ ರಾಜ್ಯ ಸರ್ಕಾರ ತನಿಖೆಗೆ ಚಿಂತನೆ ಮಾಡಿತ್ತು. ಅನಾಮಿಕ ಕೋರ್ಟಿಗೆ ಹೋಗಿ ಗುಂಡಿ ತೋರಿಸಿದ್ದ. ಧಾರ್ಮಿಕ ಕ್ಷೇತ್ರದಲ್ಲಿ ಒಳ್ಳೆಯ ರೀತಿ ನಡೆಸಿಕೊಂಡು ಹೋಗಬೇಕು. ತಿಮ್ಮರೋಡಿ ಎಲ್ಲಾ ರಗಳೆ ಮಾಡಿದ ಮೇಲೆ ಎಸ್ಐಟಿಗೆ ಕೊಡಲಾಗಿತ್ತು. ಕೋರ್ಟ್ನಿಂದ ಆದೇಶ ಆದಾಗ ಖರ್ಚು ನೋಡಲು ಆಗಲ್ಲ. ಅನಾಮಿಕ ಹೇಳಿದ ಕಡೆ ಗುಂಡಿ ತೆರೆಯಲಾಗಿದೆ ಎಂದರು.
ಮಧ್ಯಂತರ ವರದಿ ಕೊಡಲ್ಲ. ಸಂಪೂರ್ಣ ವರದಿ ಸಿಎಂ ಪಡೆಯುತ್ತಾರೆ. ಮತ್ತೆ ಗುಂಡಿ ತೋಡುವ ಪ್ರಮೇಯ ಇಲ್ಲ ಅನಿಸುತ್ತಿದೆ. ಇಲ್ಲಿಗೆ ಗುಂಡಿ ತೋಡುವ ಕೆಲಸ ಮುಗಿಯಲಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಗೊಂದಲ ಮೂಡಿಸುತ್ತಿದೆ. ಬಿಜೆಪಿ ಮಾತ್ರವಲ್ಲ, ನಾವೂ ಹಿಂದೂಗಳ ಪರವಾಗಿದ್ದೇವೆ. ನಾವೂ ಪ್ರತೀ ದಿನ ಪೂಜೆ ಪುನಸ್ಕಾರ ಮಾಡ್ತೇವೆ ಎಂದು ತಿಳಿಸಿದರು.