ದೇಶದ ಪ್ರಜೆಗಳಿಗೆ ನೀಡಲಾಗುವ ಆಧಾರ್ ಮತ್ತು ಚುನಾವಣೆ ಆಯೋಗ ನೀಡುವ ಮತದಾರರ ಗುರುತಿನ ಚೀಟಿ ಇವೆರೆಡರ ನಡುವೆ ಏಕಸಾಮ್ಯತೆ ತರಲು ಸಾಧ್ಯವಿಲ್ಲವೇ ? ಈ ಪ್ರಶ್ನೆಗೆ ಇದುವರೆಗೂ ಸರಿಯಾದ ಮತ್ತು ಸ್ಪಷ್ಟವಾದ ಉತ್ತರವಂತೂ ಸಂಬಂಧಪಟ್ಟವರಿಂದ ದೊರೆತಿಲ್ಲ !
ಪೌರತ್ವಕ್ಕೆ ಯಾವುದು ಆಧಾರ: ಭಾರತೀಯ ಪೌರತ್ವ ಹಾಗೂ ಕೇಂದ್ರ ಚುನಾವಣೆ ಆಯೋಗ ಮತ್ತದರ ಹೊಣೆಗಾರಿಕೆ. ಇದು ದೇಶದ ಉದ್ದಗಲಕ್ಕೂ ಇಂದು ಚರ್ಚೆಗೆಡೆಮಾಡಿಕೊಟ್ಟಿರುವ ಸಂಗತಿ . ಭಾರತೀಯ ಪೌರತ್ವಕ್ಕೆ ಸಾಂವಿಧಾನಾತ್ಮಕ ಅರ್ಥ, ವ್ಯಾಖ್ಯಾನಗಳುಂಟು. ದೇಶಕ್ಕೆ ಸ್ವಾತಂತ್ರ್ಯ ಬಂದ ೧೯೪೭ನೆ ಇಸ್ವಿಯಿಂದಲೂ ಭಾರತೀಯ ಪೌರತ್ವ ಕುರಿತು ಹಲವು ಹತ್ತು ವಿವಾದಗಳು ದೇಶದ ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂಕೋರ್ಟ್ ಮುಂದಿವೆ ಮತ್ತು ಇವುಗಳಲ್ಲಿ ಹಲವು ಈಗಲೂ ವಿಲೇವಾರಿಯಾಗದೆ ನ್ಯಾಯಪೀಠದ ಪರಿಶೀಲನೆಗೆಗೊಳಪಟ್ಟಿವೆ.
ಯುಪಿಎ ಅಧಿಕಾರಾವಧಿಯಲ್ಲಿ ಮೊಟ್ಟ ಮೊದಲ ಭಾರಿಗೆ ಜಾರಿಗೊಂಡ ಆಧಾರ್, ಇಂದು ದೇಶದ ಎಲ್ಲ ವ್ಯವಹಾರ ಮತ್ತು ವಹಿವಾಟಿಗೆ ಪ್ರಮುಖ ದಾಖಲೆ ಎಂದು ಪರಿಗಣಿಸಲಾಗಿದೆ. ಆದರೆ ಇದನ್ನು ಪೌರತ್ವ ದಾಖಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣೆ ಆಯೋಗವು ಈಗ ಸುಪ್ರೀಂಕೋರ್ಟ್ ಮುಂದೆ ತನ್ನ ಗಟ್ಟಿಯಾದ ಪ್ರತಿಪಾದನೆಯನ್ನು ಮಾಡಿದೆ ಈ ವಾದಕ್ಕೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದೆ. ಮತದಾರನ ಗುರುತಿನ ಚೀಟಿಗೂ ಆಧಾರ್‌ಗೂ ವ್ಯತ್ಯಾಸವಿದೆ ಆಧಾರ್ ದಾಖಲೆ ಇದ್ದ ಮಾತ್ರಕ್ಕೆ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದು ಆಯೋಗದವಾದ. ಇದಕ್ಕೆ ದೇಶದ ಸರ್ವೋನ್ನತ ನ್ಯಾಯಪೀಠವೂ ತನ್ನ ಸಹಮತ ವ್ಯಕ್ತಪಡಿಸಿರುವುದರಿಂದ ನೈಜ ಮತದಾರರನ್ನು ಗುರುತಿಸುವ ಆಯೋಗದ ಪ್ರಕ್ರಿಯೆ ಯಾವ ರೀತಿ ಮುಂದುವರಿಯಬಹುದೆಂಬ ಪ್ರಶ್ನೆ ತಲೆದೋರಿದೆ. ಬಿಹಾರ ರಾಜದ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ತಲೆದೋರಿರುವ ತಗಾದೆ ಮತ್ತು ತಕರಾರುಗಳು ಈಗ ಸುಪ್ರೀಂಕೋರ್ಟ್ ಗಂಭೀರ ಪರಿಶೀಲನೆಯಲ್ಲಿದೆ. ಯಾವುದೇ ಪೂರ್ವಭಾವಿ ನೋಟಿಸ್ ಮತ್ತು ತಿಳಿವಳಿಕೆ ಇಲ್ಲದೆ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೊಲಗಿಸಲಾಗಿದೆ ಎಂದೂ, ಇದು ತಮ್ಮ ಸಾಂವಿಧಾನಾತ್ಮಕ ಹಕ್ಕುಗಳಿಗೆ ಭಂಗ ಉಂಟು ಮಾಡಿದೆ ಎಂದು ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿರುವುದುಂಟು. ಇದನ್ನು ಸುಪ್ರೀಂಕೋರ್ಟ್ ಗಂಭೀರವಾಗಿಯೇ ಪರಿಗಣಿಸಿದ್ದು, ಪ್ರತಿಯೊಂದು ಹಂತವನ್ನೀಗ ನ್ಯಾಯಪೀಠ ಕೂಲಂಕಷ ಪರಿಶೀಲನೆಗೆ ಒಳಪಡಿಸಿದೆ. ಕಳೆದ ವಾರವೂ ಬಿಹಾರದ ಮತದಾರರ ಪಟ್ಟಿಯಿಂದ ತೊಲಗಿಸಲಾದ ಮತದಾರರ ವಿವರಗಳನ್ನು ತನಗೆ ಸಲ್ಲಿಸಲು ಸುಪ್ರೀಂಕೋರ್ಟ್ ಆಯೋಗಕ್ಕೆ ಸೂಚಿಸಿದೆ.
ಹದಿನೈದು ವರ್ಷಗಳ ಹಿಂದೆ ದೇಶದ ಎಲ್ಲ ಪ್ರಜೆಗಳಿಗೂ ಆಧಾರ್ ಕಡ್ಡಾಯವೆಂದು ಅಂದಿನ ಮನಮೋಹನಸಿಂಗ್ ಸರ್ಕಾರ ಜಾರಿ ಮಾಡಿದ ಆದೇಶದಿಂದ ಇಂದು ಪ್ರತಿಯೊಬ್ಬರಿಗೂ ಆಧಾರ್ ಲಭಿಸುವಂತಾಗಿದೆ. ಆದರೆ ಈ ದೇಶದ ನೈಜ ಪೌರರಲ್ಲದವರಿಗೂ ಆಧಾರ್ ಲಭಿಸಿರುವುದು ವಾಸ್ತವ. ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಭಾರತದೊಳಗೆ ನುಸುಳಿದ ಎಷ್ಟೋ ಮಂದಿ ನುಸುಳುಕೋರರು ಮತ್ತು ವಲಸಿಗರಿಗೂ ಆಧಾರ್ ಲಭಿಸಿದೆ. ಆಧಾರ್ ಹೊಂದಿರುವವರಲ್ಲಿ ಕೆಲ ಅಕ್ರಮ ಮತದಾರರಿರುವುದೂ ನಿಜ. ಇದು ಕೇವಲ ಬಿಹಾರ ರಾಜ್ಯಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಇಂತಹ ಅಕ್ರಮ ಮತದಾರರಿರುವುದು ಕಟುವಾಸ್ತವ. ಹಾಗಾದರೆ ಸರ್ಕಾರ ನೀಡುವ ಆಧಾರ್ ಮತ್ತು ಚುನಾವಣೆ ಆಯೋಗ ನೀಡುವ ಮತದಾರರ ಗುರುತಿನ ಚೀಟಿ ಇವೆರೆಡರ ನಡುವೆ ಏಕಸಾಮ್ಯತೆ ತರಲು ಸಾಧ್ಯವಿಲ್ಲವೇ ? ಈ ಪ್ರಶ್ನೆಗಿನ್ನೂ ಸರಿಯಾದ ಮತ್ತು ಸ್ಪಷ್ಟವಾದ ಉತ್ತರವಂತೂ ಸಂಬಂಧಪಟ್ಟವರಿಂದ ದೊರೆತಿಲ್ಲ !