ಹಾಸನ:ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದಂಪತಿ ನೀರುಪಾಲಾದ ದಾರುಣ ಘಟನೆ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ನಂಬಿಹಳ್ಳಿಯ ಗೋಪಾಲ್ (27), ದೀಪು (24) ಎಂದು ಮೃತಪಟ್ಟ ದಂಪತಿಯನ್ನು ಗುರುತಿಸಲಾಗಿದೆ ಇವರಿಬ್ಬರು ಮಧ್ಯಾಹ್ನ ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು.
ಬಟ್ಟೆ ತೊಳೆಯುವಾಗ ದೀಪು ಕಾಲು ಜಾರಿ ನಾಲೆಗೆ ಬಿದ್ದಿದ್ದು,ಆಕೆಯನ್ನು ರಕ್ಷಿಸಲು ಪತಿ ಗೋಪಾಲ್ ನಾಲೆಗೆ ಇಳಿದಿದ್ದಾರೆ. ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದರಿಂದ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ದಂಪತಿ ಮನೆಗೆ ಬಾರದಿದ್ದರಿಂದ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿ ನಂತರ ನಾಲೆ ಬಳಿ ನೋಡಿದಾಗ ಬಟ್ಟೆಗಳು ದಡದಲ್ಲಿತ್ತು. ಕೂಡಲೇ ಕುಟುಂಬಸ್ಥರು ಚನ್ನರಾಯಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಅಗ್ನಿಶಾಮಕದಳ ಸಿಬ್ಬಂದಿ ನಾಲೆಯಲ್ಲಿ ಶೋಧಕಾರ್ಯ ನಡೆಸಿದ ವೇಳೆ ಪತಿ ಗೋಪಾಲ್ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ.
ಪತ್ನಿ ದೀಪು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


