ಭಾರತ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ತಂದೆ ಮದುವೆ ಸಮಾರಂಭದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ವರ ಹಾಗೂ ಪ್ರಿಯಕರ ಪಾಲಾಷ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಂದು ವಾರದ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ತಡರಾತ್ರಿ ಈ ಘಟನೆ ನಡೆದಿರುವುದು ಕುಟುಂಬಕ್ಕೆ ಆಘಾತ ನೀಡಿದೆ. ಸ್ಮೃತಿ ಮಂದಾನ ಇನ್ ಸ್ಟಾಗ್ರಾಂನಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ ಗಳನ್ನು ಡಿಲಿಟ್ ಮಾಡಿದ್ದು, ಮದುವೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಮೃತಿ ಮಂದಾನ ಮತ್ತು ಪಾಲಾಷ್ ಮುಚ್ಚಲ್ ಅವರ ಮದುವೆಗೂ ಮುನ್ನದ ಶಾಸ್ತ್ರಗಳು ನಡೆಯುತ್ತಿವೆ. ಮದುವೆ ಸಮಾರಂಭಗಳು ನಡೆಯುತ್ತಿದ್ದಾಗ ಸ್ಮೃತಿ ಮಂದಾನ ತಂದೆ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ.
ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದು, ಕೂಡಲೇ ಚಿಕಿತ್ಸೆ ಆರಂಭಿಸಬೇಕಾಗಿದೆ. ತಂದೆಯ ಅನಾರೋಗ್ಯದ ನಡುವೆ ಮದುವೆ ಆಗಲು ಹಿಂದೇಟು ಹಾಕಿರುವ ಸ್ಮೃತಿ ಮಂದಾನ ಮದುವೆ ಮುಂದೂಡಲು ಬಯಸಿದ್ದಾರೆ.
ಇದೇ ವೇಳೆ ಸ್ಮೃತಿ ಮಂದಾನ ಮದುವೆ ಆಗಬೇಕಿರುವ ವರ ಹಾಗೂ ಪ್ರಿಯಕರ ಪಾಲಾಷ್ ಮುಚ್ಚಲ್ ಕೂಡ ವೈರಲ್ ಸೋಂಕಿನಿಂದ ಅಸಿಡಿಟಿ ಸಮಸ್ಯೆಗೆ ಒಳಗಾಗಿದ್ದು, ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರ ಆರೋಗ್ಯ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಭಾನುವಾರ ತಡರಾತ್ರಿ ಸ್ಮೃತಿ ಮಂದಾನ ಅವರ ತಂದೆಗೆ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಅವರ ಮಗ ಕರೆ ಮಾಡಿದಾಗ ನಾವು ಕೂಡಲೇ ಆಂಬುಲೆನ್ಸ್ ಕಳುಹಿಸಿಕೊಟ್ಟು ಇಸಿಜಿ ಮಾಡಿಸಿದೆವು. ಇದು ವೈದ್ಯಕೀಯದಲ್ಲಿ ಅಂಗೆನಿಯಾ ಎಂದು ಹೇಳುತ್ತಾರೆ. ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗಿದ್ದು, ಸೋಮವಾರ ಸಂಜೆ ನಂತರ ಬಿಡುಗಡೆ ಮಾಡಲಾಗುವುದು ಎಂದು ಸ್ಮೃತಿ ಮಂದಾನ ಕುಟುಂಬದ ವೈದ್ಯರು ತಿಳಿಸಿದ್ದಾರೆ.


