ಗುವಾಹತಿ: ಮಧ್ಯಮ ವೇಗಿ ಮಾರ್ಕೊ ಜಾನ್ಸೆನ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 201 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿದಿದೆ.
ಗುವಾಹತಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಸೋಮವಾರ ವಿಕೆಟ್ ನಷ್ಟವಿಲ್ಲದೇ 9 ರನ್ ಗಳಿಂದ ದಿನದಾಟ ಮುಂದುವರಿಸಿದ ಭಾರತ ತಂಡ ಚಹಾ ವಿರಾಮದ ನಂತರ ಮೊದಲ ಇನಿಂಗ್ಸ್ ನಲ್ಲಿ 83.5 ಓವರ್ ಗಳಲ್ಲಿ 201 ರನ್ ಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾ 288 ರನ್ ಗಳ ಭಾರೀ ಮುನ್ನಡೆ ಪಡೆದಿದ್ದರೂ ಆತಿಥೇಯರ ಮೇಲೆ ಫಾಲೋಆನ್ ಹೇರದೇ ಬ್ಯಾಟ್ ಮಾಡಲು ನಿರ್ಧರಿಸಿದೆ.
ದಕ್ಷಿಣ ಆಫ್ರಿಕಾ ಪರ ಕೆಳ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿ 93 ರನ್ ಗಳಿಸಿ ಶತಕ ವಂಚಿತರಾಗಿದ್ದ ಜಾನ್ಸೆನ್ ಬೌಲಿಂಗ್ ನಲ್ಲೂ ಮಿಂಚಿ 6 ವಿಕೆಟ್ ಪಡೆದು ಪಂದ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿ ಗಮನ ಸೆಳೆದರು. ಸಿಮೊನ್ ಹಾರ್ಮರ್ 3 ವಿಕೆಟ್ ಕಿತ್ತು ಉತ್ತಮ ಬೆಂಬಲ ನೀಡಿದರು.
ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 65 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ರಾಹುಲ್ (22) ರನ್ ಗಳಿಸಿ ಔಟಾದ ನಂತರ ತಂಡದ ಮಧ್ಯಮ ಕ್ರಮಾಂಕ ನಾಟಕೀಯ ಕುಸಿತಕ್ಕೆ ಒಳಗಾಯಿತು.
ಜೈಸ್ವಾಲ್ 97 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 58 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರೆ, ಕೊನೆಯ ಹಂತದಲ್ಲಿ ವಾಷಿಂಗ್ಟನ್ ಸುಂದರ್ 92 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 48 ರನ್ ಗಳಿಸಿದ್ದಾಗ ಔಟಾಗಿ 2 ರನ್ ಗಳಿಂದ ಅರ್ಧಶತಕದಿಂದ ವಂಚಿತರಾದರು.
ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ 8ನೇ ವಿಕೆಟ್ ಗೆ 72 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು 200ರ ಗಡಿ ಸಮೀಪ ತಂದರು. ಕುಲದೀಪ್ ಯಾದವ್ ಅಮೋಘ ಹೋರಾಟ ನಡೆಸಿ 134 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 19 ರನ್ ಬಾರಿಸಿದರು.


