ಫಾರೆಕ್ಸ್ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಲಾಭ ಮಾಡಿಕೊಡುವುದಾಗಿ ಉದ್ಯಮಿಗೆ 46.5 ಲಕ್ಷ ರೂ. ವಂಚಿಸಿದ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರನ್ನು ಉತ್ತರ ಕನ್ನಡದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರದ ಪ್ರಭಾತನಗರದ ನಿವಾಸಿ ಗಿರೀಶ್ (35) ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ ವಂಚನೆಗೆ ಒಳಗಾಗಿದ್ದು, ಹೈದರಾಬಾದ್‌ನಲ್ಲಿ ಬಿಲ್ಲೆ ಪ್ರವೀಣಕುಮಾರ್ (35) ಮತ್ತು ವಿನಯ್ ಕುಮಾರ್ (30) ಎಂಬವರನ್ನು ಬಂಧಿಸಿದ್ದಾರೆ. ಶಮೀಮ್ ಅಖ್ತರ್ (55) ಎಂ.ಡಿ ಆಲಮ್ ಎಂಬುವವರನ್ನು ಬಂಧಿಸಲಾಗಿದೆ.
ಉದ್ಯಮಿ ಆಗಿರುವ ಗಿರೀಶ್, ‘MarketAxess’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಆರೋಪಿಗಳು ವಾಟ್ಸಪ್ ಮೂಲಕ ಸಂಪರ್ಕಿಸಿ, ಮೇ 28, 2025 ರಿಂದ ಜುಲೈ 23, 2025 ರ ಅವಧಿಯಲ್ಲಿ ಹಂತ, ಹಂತವಾಗಿ ಒಟ್ಟು ರೂ. 46,50,000 ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಹಣ 75,00,000 ರೂ.ಗಳಾದರೂ ವಿತ್ ಡ್ರಾ ಮಾಡಲು ಬಾರದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ಗಿರೀಶ್ ದೂರು ನೀಡಿದ್ದರು.
ಬಂಧಿತರು ಆರ್ಬಿಎಲ್ (RBL) ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಾಗಿದ್ದು, ವಂಚನೆಗೆ ಅಕ್ರಮವಾಗಿ ಖಾತೆ ತೆರೆದು ಸಹಕರಿಸಿದ್ದರು. ಇನ್ನೋರ್ವ ಆರೋಪಿ ಶಮೀಮ್ ಅಖ್ತರ್ (55) ಎಂಬಾತ ಬಿಹಾರ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತ ದೂರುದಾರರನ್ನು ವಂಚಕರ ಬಲೆಗೆ ಬೀಳಿಸಲು ಸಹಕರಿಸಿದ್ದ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


