ಪಾಕಿಸ್ತಾನದ ಪೇಶಾವರದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ದಾಳಿ ಹಾಗೂ ನಂತರದ ಕಾರ್ಯಾಚರಣೆಯಲ್ಲಿ ಒಟ್ಟು 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಅಸು ನೀಗಿದವರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ.
ಪ್ಯಾರಾಮಿಲಿಟರಿ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಪ್ರಧಾನ ಕಚೇರಿಯ ಮುಖ್ಯ ದ್ವಾರದ ಮೇಲೆ ಒಬ್ಬ ಆತ್ಮಾಹುತಿ ದಾಳಿಕೋರ ದಾಳಿ ನಡೆಸಿದ್ದಾನೆ. ನಂತರ ಇನ್ನೊಬ್ಬ ಕಾಂಪೌಂಡ್ ಪ್ರವೇಶಿಸಿದ್ದಾನೆ ಎಂದು ಹಿರಿಯ ಅಧಿಕಾರಿ ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಸೇನೆ ಮತ್ತು ಪೊಲೀಸರು ಘಟನಾ ಸ್ಥಳವನ್ನು ಸುತ್ತುವರೆದಿದ್ದು, ಕೆಲವು ಭಯೋತ್ಪಾದಕರು ಪ್ರಧಾನ ಕಚೇರಿಯೊಳಗೆ ಅಡಗಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಪ್ರಧಾನ ಕಚೇರಿಯ ಮೇಲಿನ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್‌ನ ಬಣ ಜಮಾತುಲ್ ಅಹ್ರಾರ್ ಹೊತ್ತುಕೊಂಡಿದೆ.
ಈ ವರ್ಷದ ಆರಂಭದಲ್ಲಿ ಕ್ವೆಟ್ಟಾದಲ್ಲಿರುವ ಪ್ಯಾರಾಮಿಲಿಟರಿ ಪ್ರಧಾನ ಕಚೇರಿಯ ಹೊರಗೆ ಕಾರ್ ಬಾಂಬ್ ಸ್ಫೋಟಗೊಂಡು ಹತ್ತು ಜನ ಮೃತಪಟ್ಟಿದ್ದರು. ಸೆಪ್ಟೆಂಬರ್ 3 ರಂದು ಕ್ವೆಟ್ಟಾದಲ್ಲಿ ರಾಜಕೀಯ ಸಮಾವೇಶದ ವೇಳೆ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದರು.


