ಇಂದಿನ ಹೆಚ್ಚಿನ ಮಕ್ಕಳಿಗೆ ಕೃಷಿ ಬದುಕಿನ ಅನುಭವವಿಲ್ಲವಾಗಿದೆ. ಹೀಗಾಗಿ ರೈತನ ಜೀವನ, ಕೃಷಿ ವಿಧಾನ, ಹಳ್ಳಿಯ ಬದುಕು ಇದೆಲ್ಲವೂ ಅನುಭವಕ್ಕೆ ಬರಬೇಕು. ಆದ ಕಾರಣ ಇದರ ಬಗ್ಗೆ ರಾಜ್ಯ ಶಿಕ್ಷಣ ನೀತಿಯಡಿ ಪಠ್ಯದಲ್ಲಿ ಅಳವಡಿಸಲು ಆಲೋಚನೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಿಬಿಎಸ್ಇ ಮಾಜಿ ನಿರ್ದೇಶಕ ಹಾಗೂ ಶಿಕ್ಷಣ ತಜ್ಞ ಜಿ ಬಾಲಸುಬ್ರಮಣ್ಯಮ್ ವಿರಚಿತ “ವಾಕಿಂಗ್ ವಿಥ್ ವಿಶ್ವ – ಎ ಜರ್ನಿ ಟು ಲೀಡರ್ಶಿಪ್ ಅಲಾಂಗ್ ದಿ ಫಾರಂ ಲಾಂಡ್ಸ್” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
“ನಮ್ಮ ಸುತ್ತಲಿನ ಅನೇಕ ದಿನಬಳಕೆಯ ವಸ್ತುಗಳ ಮೂಲ ರೈತ. ಉದಾಹರಣೆಗೆ ಎಲ್ಲರೂ ರೇಷ್ಮೆಯನ್ನು ಇಷ್ಟಪಡುತ್ತಾರೆ. ಆದರೆ ಅದು ಹೇಗೆ ಉತ್ಪಾದನೆಯಾಗುತ್ತದೆ ಎನ್ನುವ ಕಲ್ಪನೆ ಕೂಡ ಇರುವುದಿಲ್ಲ. ರೇಷ್ಮೆ ಹುಳಗಳು ಗೂಡು ಕಟ್ಟಿದ ನಂತರ ಅದರ ಗೂಡಿನ ಹೊರಭಾಗದ ಕವಚದಲ್ಲಿ ಇರುವ ನಾರಿನ ಅಂಶವನ್ನು ತೆಗೆದು ದಾರವನ್ನಾಗಿ ಪರಿವರ್ತಿಸಿ ಸೀರೆಯನ್ನು ನೇಯ್ಗೆ ಮಾಡಲಾಗುತ್ತದೆ. ಭಾರತ್ ಜೊಡೋ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ರೇಷ್ಮೆ ಉತ್ಪಾದನೆಯ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದೆ. ಅವರು ಆಶ್ಚರ್ಯಗೊಂಡರು” ಎಂದರು.
“ನಮ್ಮ ಮಕ್ಕಳು ಗ್ರಾಮೀಣ ಭಾಗಕ್ಕೆ ತೆರಳಿ ರೈತನ ಬದುಕನ್ನು ಕಣ್ಣಾರೆ ನೋಡಬೇಕು. ಜೊತೆಗೆ ಅವರೂ ಸಹ ಕೃಷಿಯ ಅನುಭವ ಪಡೆಯಬೇಕು. ಒಂದು ಬೆಳೆ ತೆಗೆಯಬೇಕು ಎಂದು ಎಷ್ಟು ಕಷ್ಟವಿದೆ ಎನ್ನುವುದು ಅರಿವಿಗೆ ಬರಬೇಕು. ಇದರಿಂದ ಕೃಷಿಯ ಬೆಳವಣಿಗೆ ಸಾಧ್ಯ. ಇಂದಿನ ಮಕ್ಕಳಿಗೆ ರೈತನ ಬೆಲೆ, ಅವನ ಬದುಕು ತಿಳಿಯಬೇಕು. ರಾಜಸ್ಥಾನದ ನಂತರ ಕರ್ನಾಟಕವು ಅತಿಹೆಚ್ಚು ಕೃಷಿಭೂಮಿ ಹೊಂದಿರುವ ರಾಜ್ಯ. ಆದಕಾರಣ ಕೃಷಿಕರಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸುತ್ತಿದ್ದೇವೆ, ಜಾರಿಗೆ ತರುತ್ತಿದ್ದೇವೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆ ಮಾಡಿಕೊಂಡಿಕೊಂಡಿದ್ದು ಶಿಕ್ಷಣ ಕ್ಷೇತ್ರ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಹೇಳಿದರು.
“ನಾನು ರೇಷ್ಮೆ ಹಾಗೂ ಕ್ಷೀರ ಉತ್ಪತ್ತಿಯ ನೆಲದಿಂದ ಬಂದವನು. ನಾವು ಸಹ ರೇಷ್ಮೆ ಬೆಳೆಯುತ್ತೇವೆ, ಮಾವು, ಭತ್ತ, ರಾಗಿ ಬೆಳೆದಿದ್ದೇವೆ. ರೇಷ್ಮೆ ಬಟ್ಟೆ ಸುಮಾರು ವರ್ಷಗಳ ಕಾಲ ಹಾಳಾಗದೆ ಇರುತ್ತದೆ. ಅಷ್ಟು ಗುಣಮಟ್ಟವನ್ನು ರೇಷ್ಮೆ ಬಟ್ಟೆ ಹೊಂದಿರುತ್ತದೆ. ಮಹಿಳೆಯರಿಗೆ ಇದು ಅತ್ಯಂತ ಅಚ್ಚುಮೆಚ್ಚು. ವರ್ಷಕ್ಕೆ ಒಮ್ಮೆಯಾದರೂ ಅದನ್ನು ಕೈಯಲ್ಲಿ ಹಿಡಿದು ನೋಡುವುದೇ ಅವರಿಗೆ ಆನಂದದ ವಿಚಾರ. ಪ್ರತಿಯೊಬ್ಬ ರೈತನು ಹುಟ್ಟುತ್ತಲೇ ನಾಯಕನು. ನನ್ನ ಕ್ಷೇತ್ರದಲ್ಲಿ ಕೃಷಿ ಕಾಲೇಜನ್ನು ಪ್ರಾರಂಭ ಮಾಡಿದ್ದೇವೆ. ಏಕೆಂದರೆ ನನಗೆ ಕೃಷಿಯ ಮಹತ್ವ ತಿಳಿದಿದೆ. ಬೆಂಗಳೂರಿನ 100 ಕಿಮೀ ಅಂತರದಲ್ಲಿ ರಫ್ತಿನ ಗುಣಮಟ್ಟದ ಹಣ್ಣುಗಳನ್ನು ಬೆಳೆಯುತ್ತಾರೆ. ಪುಷ್ಪೋದ್ಯಮ ಸಾಕಷ್ಟು ಹೆಸರು ಮಾಡಿದೆ. ಶೇ. 20 ರಷ್ಟು ವಿಮಾನಗಳು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುತ್ತವೆ. ಆದರೆ ಇನ್ನೂ ನಮ್ಮ ಕೃಷಿಕರ ಮಾರುಕಟ್ಟೆ ವಿಸ್ತರಣೆಯಾಗಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಈಗಿನ ಯುವ ಪೀಳಿಗೆಗೆ ನಾನು ಕಿವಿಮಾತು ಹೇಳುತ್ತೇನೆ. ಕೇವಲ ಕೆಲಸ ಹುಡುಕಿಕೊಂಡು ಹೋಗಬೇಡಿ. ಕೃಷಿಯನ್ನು ಆಧರಿಸಿದ ಉದ್ಯೋಗ ಪ್ರಾರಂಭಿಸಿ ಉದ್ಯೋಗ ನೀಡುವ ಉದ್ಯಮಿಗಳಾಗಿ. ಅತ್ಯುತ್ತಮ ಕಾಫಿ, ಮಸಾಲೆ ಪದಾರ್ಥಗಳು, ಟೀ, ಮಾವು, ಭತ್ತ, ರಾಗಿ, ಬೆಂಗಳೂರು ದ್ರಾಕ್ಷಿ ಎಲ್ಲವೂ ಉತ್ತಮ ಗುಣಮಟ್ಟದಲ್ಲಿವೆ. ರೈತ ಬೆಳೆಯುವ ಕಬ್ಬಿನಿಂದ ಹಾಳೆಯಿಂದ ವಿದ್ಯುತ್ ವರೆಗೂ ಉತ್ಪಾದನೆ ಮಾಡಬಹುದು. ಈ ದೇಶ ವಿದ್ಯಾವಂತರು, ಬುದ್ದಿವಂತರು ಇಲ್ಲದೇ ಇದ್ದರು ನಡೆಯುತ್ತದೆ ಆದರೆ ಪ್ರಜ್ಞಾವಂತರು ಇಲ್ಲದೇ ಇದ್ದರೆ ನಡೆಯುವುದಿಲ್ಲ. ಉಳುಮೆ ಮಾಡುವ ರೈತ ಯಾವುದೇ ಎಂಜಿನಿಯರಿಂಗ್ ಓದದೆಯೂ ಅದ್ಬುತವಾಗಿ ಉಳುಮೆಮಾಡುತ್ತಾನೆ. ಆದರೆ ಮಾರುಕಟ್ಟೆ ಮಾತ್ರ ಆತನಿಗೆ ತಿಳಿದಿಲ್ಲ. ಆತ ಬೆಳೆದಿದ್ದನ್ನು ಯಾರೋ ತೆಗೆದುಕೊಂಡು ಉತ್ತಮವಾಗಿ ಪ್ಯಾಕ್ ಮಾಡಿ ಮಾರಾಟ ಮಾಡಿ ಹಣ ಮಾಡುತ್ತಾರೆ” ಎಂದರು.
ಸಭಿಕರಿಗಾಗಿ ಪುಸ್ತಕ ವಾಚಿಸಿದ ಡಿಸಿಎಂ
“ಅತ್ಯುತ್ತಮ ನಾಯಕರು ದೇಶ, ಸಂಸ್ಕೃತಿ, ಭಾಷೆಯನ್ನು ಕಟ್ಟುತ್ತಾರೆ ಜೊತೆಗೆ ತನ್ನ ಸುತ್ತಲಿನ ಜನರನ್ನೂ ಬೆಳೆಸುತ್ತಾರೆ. ಇಂತಹ ನಾಯಕರು ದೂರದೃಷ್ಟಿಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಇಂತವರ ಜೀವನಗಾಥೆಯನ್ನು ಜನರು ಅನುಸರಿಸುತ್ತಾರೆ” ಎಂದು ಪುಸ್ತಕದಲ್ಲಿಯ ಒಂದು ಭಾಗವನ್ನು ಸಭಿಕರಿಗಾಗಿ ಡಿಸಿಎಂ ವಾಚಿಸಿದರು. ಕಳೆದ ವಾರ ಮುಖ್ಯಮಂತ್ರಿಗಳು ಹಾಗೂ ಇತರೇ ಸಚಿವರ ಜೊತೆ ಎನ್ ಇಪಿ ಬದಲಾಗಿ ಎಸ್ ಇಪಿ ಜಾರಿ ಕುರಿತು ಚರ್ಚೆ ನಡೆಸಲಾಯಿತು. ಮುಂದಿನ ಬಾರಿ ಈ ಪುಸ್ತಕದ ಲೇಖಕರ ಸಲಹೆ ತಗೆದುಕೊಳ್ಳಲಾಗುವುದು ಎಂದರು.
ಸ್ಯಾಮ್ ಪಿತ್ರೋಡಾ ಸಲಹೆ
“ಈ ಪುಸ್ತಕದ ಬರಹಗಾರರಾದ ಬಾಲಸುಬ್ರಹ್ಮಣ್ಯ ಅವರು ಕೃಷಿಕರಾಗಿದ್ದಾರೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು. ಕಳೆದ ಆರೇಳು ತಿಂಗಳ ಹಿಂದೆ ಅಮೆರಿಕಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ಯಾಮ್ ಪಿತ್ರೋಡಾ ಅವರನ್ನು ಭೇಟಿಯಾದೆ. ಆಗ ಅವರು ಡಿಕೆ ಕರ್ನಾಟಕದ ನಗರ ಭಾಗದ ಶಾಲೆಯ ಮಕ್ಕಳಿಗೆ ಕಡ್ಡಾಯವಾಗಿ ಹಳ್ಳಿಯ ಜೀವನ, ಕೃಷಿಕರ ಜೀವನ ತೋರಿಸಬೇಕು. ಒಂದು ರೈತನ ಕುಟುಂಬ ಹೇಗೆ ಜೀವನ ನಡೆಸುತ್ತದೆ ಎನ್ನುವ ಅನುಭವ ಅವರಿಗೆ ದೊರೆಯಬೇಕು ಎಂದು ಸಲಹೆ ನೀಡಿದರು” ಎಂದರು.
ಬಾಲಸುಬ್ರಹ್ಮಣ್ಯ ಅವರು ಶಿಕ್ಷಣದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಇವರ ಜೀವನಾನುಭವವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು ಪ್ರಾಥಮಿಕ ಶಿಕ್ಷಣದ ಬಗ್ಗೆ ಸಾಕಷ್ಟು ಅಂಶಗಳನ್ನು ತಿಳಿದುಕೊಂಡಿದ್ದಾರೆ. ಈ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಹಾಜರಾದೆ. ನಮ್ಮ ರಾಜ್ಯ ಐಟಿ ಪರಿಣಿತರ ರಾಜ್ಯವಾಗಿದೆ. ನಮ್ಮಲ್ಲಿ ಸುಮಾರು 25 ಲಕ್ಷ ಸಾಫ್ಟ್‌ವೇರ್ ಎಂಜಿನಿಯರ್ ಗಳಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ವಿದ್ದಾರೆ. ಮೆಟ್ರೋ ಚಾಲನೆಗೆ ಬಂದ ಪ್ರಧಾನಿಯವರು ಸಹ ಬೆಂಗಳೂರನ್ನು ಹೊಗಳಿದರು. ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತಿದೆ ಎಂದರು.